Wednesday, December 30, 2009

ಸಾವಿನ ಬಗ್ಗೆ ಗಿಬ್ರಾನ್ ಸಾಲುಗಳು...

ನೀವು ಸಾವಿನ ರಹಸ್ಯ ತಿಳಿಯಲು ಶೋಧನೆ ನಡೆಸಬಹುದು.

ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು?

ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,

ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...!

ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ?

ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,

ಅದು ಲೀನವಾಗಲಿ ಬದುಕಿನ ಶರೀರದೊಳಗೆ...

ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ.

ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ.

ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ

ವಸಂತದ ಕನಸು ಕಾಣುತ್ತಿರುತ್ತದೆ.

ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ,

ಅನಂತದೆಡೆಗೆ ತೆರಕೊಳ್ಳುವ ಹಾದಿಗೆ!

ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ?

ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು,

ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು

ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ?


ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು!

ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು...

ಭೂಮಿ ಪ್ರತಿ ಅಂಗಾಂಗಗಳ ತಟ್ಟಿದಾಗಲೇ ನಿಮ್ಮ ನಿಜವಾದ ನೃತ್ಯ ಶುರುವಾಗೋದು...!

-ದಿಲಾವರ್
ಮೂಲ: ಖಲೀಲ್ ಗಿಬ್ರಾನ್.



'ಮಂಡೆ ಬಿಸಿ' ಮಾಡುವ ಟಿವಿ ಜನ ಮತ್ತು ಗಿಬ್ರಾನ್ ಸಾಲುಗಳ ನೆನಪು...
ನಮ್ಮ ಮಾಧ್ಯಮ ಜಗತ್ತು ಸಾವಿನಂಥ ವಾರ್ತೆಯನ್ನೂ ಬಿಕರಿಗೆ ಬಳಸಿಕೊಳ್ಳುವುದನ್ನು ಕಂಡಾಗ ದಿಲ್ ನಾರಾಜ್ ಆಯ್ತು. ಈ ವರ್ಷದ ಕೊನೆಯ ಮೂರು ದಿನಗಳಲ್ಲಿ (28, 29, 30) ರಾಜ್ಯದ ಜನತೆಗೆ ಮೃತ್ಯು ಎನ್ನುವುದು ಯಾಕೊ ಕಸಿವಿಸಿ ಮೂಡಿಸಿತು. ಜನಪ್ರಿಯತೆಯನ್ನೇ ನೆಚ್ಚಿ ಬದುಕಿದ್ದ ಇಬ್ಬರು ಗ್ಲ್ಯಾಮರ್ ಜಗದ ತಾರೆಯರು (ಗಾಯಕ ಸಿ. ಅಶ್ವಥ್ ಮತ್ತು ನಟ ವಿಷ್ಣುವರ್ಧನ್) ಇದೇ ಅವಧಿಯಲ್ಲಿ ಇಹಲೋಕ ತ್ಯಜಿಸಿದರು.

ಅವರ ಬಗ್ಗೆ ಅಭಿಮಾನ ಮತ್ತು ಅವರು ಪ್ರತಿನಿಧಿಸುತ್ತಿದ್ದ ಕಲೆಯ ಮೂಲಕ ನೀಡಿದ ಮನರಂಜನೆಯನ್ನು 'ಅಮಲಾಗಿಸಿಕೊಂಡಂತಿದ್ದ ಅಭಿಮಾನಿ' (ಎಲ್ಲರೂ ಅಲ್ಲ) ಬಳಗದ ಪ್ರೀತಿ ಮತ್ತು ಹುಚ್ಚಾಟಗಳನ್ನೇ ಟಿವಿ ಮಾಧ್ಯಮ ದೊಡ್ಡದು ಮಾಡಿ, ಇಡೀ ದಿನ ಬಿಟ್ಟೂ ಬಿಡದೇ ಅದನ್ನೇ ಬಿತ್ತರಿಸಿದ್ದು ಅತಿರೇಕವೆನಿಸಿತು. ನಡುವೆ ಲಾಭ ತಂದುಕೊಡಬಲ್ಲ ಜಾಹೀರಾತುಗಳ ಭಾರಿ ಪೈಪೋಟಿ.

ಮುಗ್ಧ ಜನರಿಗೆ ಅನಗತ್ಯವಾಗಿ ಈ ವಿಷಯಗಳ ಹುಚ್ಚು ಹಿಡಿಸುವಂಥ, ಅವರನ್ನು ಪ್ರವೋಕ್ ಮಾಡುವಂಥ ಮತ್ತು ಬೇಕೆಂದೇ ಸೆನ್ಸೇಷನ್ ಹುಟ್ಟು ಹಾಕುವಂಥ ಟಿವಿ ಮಾಧ್ಯಮಗಳ ಪ್ರವೃತ್ತಿ ಈಗ್ಯಾಕೊ ಅತಿಯಾಗುತ್ತಿದೆ. ಮತ್ತು ಇಲ್ಲಿ ಸಾಯುವ ವ್ಯಕ್ತಿಯ ಜಾತಿ, ಧರ್ಮ, ಪ್ರದೇಶವೂ ಮುಖ್ಯವಾಗುತ್ತಿರುವುದು ಇನ್ನೂ ಅಸಹ್ಯದ ಸಂಗತಿ. ಬೇಕೆಂದೇ ಕೆಲವರ ವೈಭವೀಕರಣ, ಮತ್ತವರ ನಂಬಿಕೆ, ಆಚರಣೆ, ಸಿದ್ಧಾಂತಗಳ ಅನಗತ್ಯ ಪ್ರಚಾರ, ಕೆಲವರ ಬಗ್ಗೆ ಉದ್ದೇಶಪೂರ್ವಕ ಎನಿಸದಂತೆಯೂ ಉದ್ದೇಶಪೂರ್ವಕವಾಗೇ ಮಾಡುವ ಕ್ಯಾರೆಕ್ಟರ್ ಅಸ್ಯಾಸಿನೇಷನ್, ಇನ್ನು ಕೆಲವರ ನೆಗ್ಲೆಕ್ಟ್ ಮಾಡುವ ಯತ್ನಗಳು ಅಸಹ್ಯ ಹುಟ್ಟಿಸುತ್ತಿವೆ.


ಇದೆಲ್ಲ ಯೋಚಿಸಿ ದಿಲ್ ಯಾಕೊ ಬೇಸರಗೊಂಡಿತು. ಲೆಬೆನಾನ್ ನ ದಾರ್ಶನಿಕ ಕವಿ ಖಲೀಲ್ ಗಿಬ್ರಾನ್, ಸಾವಿನ ಮತ್ತು ಒಟ್ಟಾರೆ ಮನುಷ್ಯ ಬದುಕಿನ ಸಾರದ ಬಗ್ಗೆ 'ಪ್ರೊಫೆಟ್' ಪುಸ್ತಕದಲ್ಲಿ ಬರೆದ ಸಾಲುಗಳು ನೆನಪಾದವು. ಅವನ ಆ ಸಾಲುಗಳನ್ನು ನಾನು ಮೇಲಿನಂತೆ ಅರ್ಥಮಾಡಿಕೊಂಡೆ ಅಷ್ಟೇ.

Saturday, October 31, 2009

ರಾಜ್ಯೋತ್ಸವದ ಶುಭ ನುಡಿಗಳು....

ಭಾಷೆ ಅಂದರೆ, ಆಡುವುದು ಮತ್ತು ಬರೆಯುವುದು ಮಾತ್ರವಲ್ಲ. ಅದು ಒಟ್ಟು ಬದುಕು. ಭಾಷೆಗೆ ಸಂಬಂಧಿಸಿದಂತೆ ನಮಗೆ ಇಂಥದೊಂದು ಸಮಗ್ರ ಬದುಕಿನ ಕಲ್ಪನೆ ಇದೆ. ಉತ್ತರ, ದಕ್ಷಿಣ, ಮೂಢಣ, ತೆಂಕಣ... ಎಲ್ಲದರ ಹಂಗು ತೊರೆದ ಒಂದು ಜನಸಂಸ್ಕೃತಿ ಕಟ್ಟಬಲ್ಲ ಭಾಷೆ ನಮ್ಮ ನಿಜ ಕಾಳಜಿ. ಅದನ್ನೇ ಕನ್ನಡದಲ್ಲಿ ಕಾಣಲು ಸಾಧ್ಯವಾಗಿದೆ. ಹಾಗಾಗಿಯೇ ಕನ್ನಡರಾಜ್ಯ ಎಂದರೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಆಗಲು ಸಾಧ್ಯವಿದೆ. ಈ ಭಾಷೆಗೆ ಹೀಗೆ ಎಲ್ಲ ಸೀಮೆಗಳನ್ನು ಒಳಗೊಳ್ಳುವ ಉದಾತ್ತ ಭಾವವಿದೆ.
ಕನ್ನಡ ನಮಗೆ ನೆಲದ ಭಾಷೆ, ಆಡುವ ಮತ್ತು ಬರೆಯುವ ಭಾಷೆ... ಒಟ್ಟು ಬದುಕಿನದೇ ಭಾಷೆಯಾಗಿದೆ.
ಕನ್ನಡದ ಉದಾತ್ತ ಭಾವಕ್ಕೆ ಜೀವಪರ ಆಶಯಗಳಿವೆ. ಹೀಗಾಗಿ ಇಲ್ಲಿ ವಿಜ್ಞಾನ, ತಂತ್ರಜ್ಞಾನ ಸುಪ್ತವಾಗಿ ಬೆಳೆಯಿತು. ಸಾಫ್ಟ್ ವೇರ್ ಮೂಲಕ ಕನ್ನಡದ ಗಾಳಿ ವಿಶ್ವದ ದಶದಿಕ್ಕಿಗೂ ಹಬ್ಬಿದ್ದು ಇಂಥ ಜೀವಪರ ಆಶಯದಿಂದಲೇ ಎಂದು ಬೇರೆ ಹೇಳಬೇಕಾ?
ಆದರೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಕಸುವು ತುಂಬುವ ಕೆಲಸ ಮಾತ್ರ ಅಂದುಕೊಂಡಂತೆ ಆಗುತ್ತಿಲ್ಲ. ಶಿಕ್ಷಣದ ಸ್ವರೂಪದಲ್ಲೇ ಕನ್ನಡ ಸಂಸ್ಕೃತಿ ಮತ್ತಷ್ಟು ಶಕ್ತಿಯುತವಾಗಿ ಸೇರಿಕೊಳ್ಳಬೇಕಿದೆ. ಇದು ಸರ್ಕಾರಗಳೇ ಮಾಡಬೇಕಾದ ಕೆಲಸ. ಪ್ರಜ್ಞಾವಂತರು, ಚಿಂತಕರು ಇದಕ್ಕೆ ಒತ್ತಾಸೆಯಾಗಿರಬೇಕಾಗುತ್ತದೆ.
ರಾಜ್ಯದ ಪ್ರತಿ ಪ್ರಜೆಯ ಜೀವದ್ರವ್ಯ ಕನ್ನಡ ಸಂಸ್ಕೃತಿ ಆಗಬೇಕು ಎನ್ನುವ ಇಂಥ ಮನೋಧರ್ಮ ಮತ್ತಷ್ಟು ಕಸುವು ಪಡೆದುಕೊಳ್ಳಲಿ.
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು

Tuesday, October 27, 2009

ಯಡಿಯೂರಪ್ಪ ಕುರ್ಚಿಗೆ ಗಣಿ ಧಣಿಗಳಿಟ್ಟ ರಾಜಕೀಯ ಬಾಂಬ್!

ನಮ್ಮ ಸಮಾಜದಲ್ಲಿ ಸಹಿಷ್ಣುತೆ ಕಳೆದುಹೋಗುತ್ತಿದೆ. ಮತ್ತು ಕಟ್ಟರ್ ಪಂಥೀಯನಾಗಿ ಇಡೀ ವಿಶ್ವದಲ್ಲೇ ಬದುಕಲು ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ಮತೀಯವಾದವನ್ನಿಟ್ಟುಕೊಂಡು ಒಂದು ರಾಜ್ಯದಲ್ಲಿ ಸಾಮ್ರಾಜ್ಯ ಕಟ್ಟುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ. ಗುಜರಾತ್ ನಲ್ಲಿ ನರೇಂದ್ರ ಮೋದಿ ಮತೀಯ ಮೋಡಿ ಯಶಸ್ವಿಯಾಗಿದೆ ಎನ್ನುವ ಭ್ರಮೆಯೊಂದನ್ನು ನಂಬಿಕೊಂಡು ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಏನೆಲ್ಲ ಕಸರತ್ತು ನಡೆಸಿತು. ಅದೀಗ ತಿರುಗುಬಾಣವಾಗುತ್ತಿದೆ.

ಯಡಿಯೂರಪ್ಪ ಕೇವಲ ಲಿಂಗಾಯತರನ್ನಿಟ್ಟುಕೊಂಡು ರಾಜ್ಯಭಾರ ನಡೆಸಲು ಹವಣಿಸುವುದು ಬಹು ಬೇಗ ಜನತೆಗೆ ಅರ್ಥವಾಗಿಬಿಟ್ಟಿತು. ಮಠಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ಸಮುದಾಯದ ದ್ರುವೀಕರಣಕ್ಕೆ ಯತ್ನಿಸಿದರು. ಈ ಭರಾಟೆಯಲ್ಲಿ ತಮಗೆ ಬೆಂಗಾವಲಾಗಿ ನಿಂತ ಗಣಿ ಧಣಿಗಳ ಉಪಕಾರವನ್ನೇ ಮರೆತರು. ರೆಡ್ಡಿ ನಾಯಕರನ್ನು, ನಾಯಕ ಸಮಾಜದವರನ್ನು ಹೇಗಾದರೂ ನಿಭಾಯಿಸಬಹುದು ಎನ್ನುವ ಅವರ ಲೆಕ್ಕಾಚಾರ ತಲೆಕೆಳಗಾಯಿತು.

ಸಂಘ ಪರಿವಾರದ ಕೆಂಗಣ್ಣಿಗೂ ಯಡಿಯೂರಪ್ಪ ಗುರಿಯಾದರು. ಬಿಜೆಪಿಯಲ್ಲಿನ ಬ್ರಾಹ್ಮಣರನ್ನು ಕಡೆಗಣಿಸಲಾಯಿತೆನ್ನುವ ವ್ಯವಸ್ಥಿತ ಪುಕಾರಿಗೆ ಮಾಧ್ಯಮಗಳ ಪರೋಕ್ಷ ಸಹಾಯವೂ ದೊರಕಿತು. ಹಿಂದೂತ್ವದ ಹೂಂಕಾರ ಎತ್ತಲೆಂದು ಯಡಿಯೂರಪ್ಪ ಅವರನ್ನು ಬಳಸಿಕೊಂಡ ಸಂಘ ಪರಿವಾರಕ್ಕೆ ಒಂದು ರೀತಿಯ ಆಘಾತಕಾರಿ ಬೆಳವಣಿಗೆ ಇದು. ಹಿಂದೂ ಸಂಘಟನೆ ಬಿಟ್ಟು ಅದರಿಂದ ಶತಮಾನಗಳ ಹಿಂದೆ ಹೊರಬಂದ ಬಸವಣ್ಣನ ಅನುಯಾಯಿಗಳ ವೀರಶೈವ ಧರ್ಮ ಸಂಘಟನೆಗೆ ನಿಂತರು ಯಡಿಯೂರಪ್ಪ. ಈ ಯತ್ನ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಲು ಪ್ರಮುಖ ಕಾರಣ. ಅನಂತಕುಮಾರ್ ಮತ್ತಿತರ ಬ್ರಾಹ್ಮಣ ನಾಯಕರ ಹಿಂದೂತ್ವದ ಜಪಕ್ಕೆ ಬಿಜೆಪಿ ಪಾಳಯದಲ್ಲಿ ಕವಡೆ ಕಿಮ್ಮತ್ತೂ ಇರಲಿಲ್ಲ. ಈ ಗ್ಯಾಂಗ್ ಕೂಡ ಶಾಕ್ ಕೊಡಲು ಹೊಂಚು ಹಾಕುತ್ತಲೇ ಇದೆ.
ಇನ್ನು ರೆಡ್ಡಿ ಬಳಗ, ಅದಿರು ಲಾರಿಗೆ ವಿಧಿಸಿದ ಭಾರಿ ಸುಂಕ ತೆರಿಗೆಯಿಂದ ತಮ್ಮ ವ್ಯವಹಾರಕ್ಕೆ ಕಲ್ಲು ಬೀಳುತ್ತದೆಂದು ಕಂಗಾಲಾಗಿದೆ. ಸಿಎಂ ಗೆ ಮತ್ತು ಪಾರ್ಟಿಗೆ ಬೇಕಾದಾಗ ದುಡ್ಡು, ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ರೆಡ್ಡಿಗಳಿಗೆ ಭಾರಿ ತೆರಿಗೆ ವಿಧಿಸುವ ತಂತ್ರ ತಲೆಬಿಸಿ ತಂದಿದೆ. ಸಿಎಂ ವಿರುದ್ಧ ತಿರುಗಿ ಬೀಳಲು ಇದಕ್ಕಿಂತ ಉತ್ತಮ ಅವಕಾಶ ಬೇಕಾ?
ಅತ್ತ ನಾಯಕ ಸಮುದಾಯದ ಸಚಿವರು, ಸದಸ್ಯರು ರಾಜಕೀಯ ದಾಳ ಎಸೆಯುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ರೆಡ್ಡಿಗಳು ಪರಿಹಾರ ಕಾರ್ಯಕ್ಕೆಂದು ತಾವೇ ಸ್ವತಃ ಐವತ್ತು ಸಾವಿರ ಮನೆ ಕಟ್ಟಿಸಿಕೊಡುವ ನಿರ್ಧಾರಕ್ಕೆ ಬಂದಿದ್ರು. ಈ ಸಂಬಂಧ ಯಡಿಯೂರಪ್ಪ ಅವರಿಂದ ಗ್ರೀನ್ ಸಿಗ್ನಲ್ ಪಡೆಯಲೆತ್ನಿಸಿದಾಗ ಅವರು ಗರಂ ಆಗಿದ್ದಾರೆ. ಸರ್ಕಾರಕ್ಕೇ ಮುಜುಗರ ತರುವ ಯತ್ನವಿದು ಎಂದು ಸಿಎಂ ಸಿಡಿಮಿಡಿಗೊಂಡಿದ್ದಾರೆ. ಅಷ್ಟು ಹಣ ಸರ್ಕಾರಕ್ಕೆ ಕೊಟ್ಟರೆ, ಸರ್ಕಾರವೇ ನಿಂತು ಇದನ್ನು ಮಾಡಬಹುದಲ್ಲ... ಎನ್ನುವ ಪ್ರತಿದಾಳ ಎಸೆಯಲೆತ್ನಿಸಿದ್ದಾರೆ. ಇದು ರೆಡ್ಡಿ ಬಂಧುಗಳ ಕೋಪ ನೆತ್ತಿಗೇರಲು ಕಾರಣವಾಗಿದೆ. ಹೀಗಾಗಿ ದೊಡ್ಡ ಕಲ್ಲು ಬೀಸುವ ನಿರ್ಧಾರಕ್ಕೆ ರೆಡ್ಡಿ ಗ್ಯಾಂಗ್ ಸಜ್ಜಾಗುತ್ತಿದೆ.
ಯಡಿಯೂರಪ್ಪ ಮುಂಚಿನಿಂದ ಅಗ್ರೆಸಿವ್ ನೆಸ್ ಗೆ ಒತ್ತು ಕೊಟ್ಟರು. ಅದು ಅಭಿವೃದ್ಧಿ ಮಂತ್ರಕ್ಕಷ್ಟೇ ಸೀಮಿತವಾಗಲಿಲ್ಲ. ಲಿಂಗಾಯತರ ಕ್ಷೇಮಾಭಿವೃದ್ಧಿಗಾಗಿ ಎಲ್ಲ ಮಾಡುತ್ತಿರುವುದು ಎನ್ನುವಂತೆ ವರ್ತಿಸತೊಡಗಿದರು. ಕೊಂಚ ಸಂಯಮದಿಂದ ಮತ್ತು ಪರಧರ್ಮ ಸಹಿಷ್ಣು ಭಾವನೆಯಿಂದ ಕೆಲಸ ಮಾಡಬೇಕಿತ್ತು. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೂ ಆಗುತ್ತಿದೆ. ಎಲ್ಲೋ ಏನೋ ನಡೆಯುತ್ತಿದೆ. ಬಳ್ಳಾರಿ ಶಕ್ತಿ ಕೇಂದ್ರವಾಗುತ್ತಿರುವುದರ ಹಿಂದೆ ಪ್ರತಿಪಕ್ಷಗಳ ರಾಜಕೀಯ ತಂತ್ರವೂ ಇದೆ ಅನಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ವರ್ಚಸ್ಸು ಪ್ರಪಾತಕ್ಕಿಳಿಯುತ್ತಿದೆ. ಅದರ ಪರಿಣಾಮ ರಾಜ್ಯಕ್ಕೂ ಆಗುತ್ತಿದೆ. ಅಲ್ಲಿ ಅಡ್ವಾಣಿ ಅವರಿಗೆ ಗೇಟ್ ಪಾಸ್ ರೆಡಿಯಾಗುತ್ತಿದೆ. ಇಲ್ಲಿ ಯಡಿಯೂರಪ್ಪ ಕುರ್ಚಿಗೆ ಗಣಿ ಧಣಿಗಳು ಬಾಂಬ್ ಕಟ್ಟಿ ಕೂತಿದ್ದಾರೆ. ಮತ್ತೊಂದು ಚುನಾವಣೆ ಬರುವುದೋ ಅಥವಾ ಮತ್ತೊಬ್ಬ ಲಿಂಗಾಯತನ ಕೈಗೇ ಸರ್ಕಾರ ಹೋಗುವುದೋ? ರಾಮುಲು ಅದೃಷ್ಟ ಖುಲಾಯಿಸಲೂಬಬುದೇನೋ!

Thursday, October 15, 2009

ರಾಜ್ಯದ ಉತ್ತರದಲ್ಲಿ ಅತಿವೃಷ್ಠಿ: ಪರಿಹಾರ ಮತ್ತು ರಾಜಕೀಯ ಪ್ರವಾಹ!

ರಾಜ್ಯದ ಉತ್ತರ ಭಾಗದಲ್ಲಿ ಅತಿವೃಷ್ಟಿ. ರಾಜಕೀಯಕ್ಕೆ ಮತ್ತು ದುಡ್ಡು ಕೊಳ್ಳೆ ಹೊಡೆಯುವುದಕ್ಕೆ ಬಹಳ ಪ್ರಶಸ್ತ ಕಾಲ. ಸಿಂಪತಿ, ನೆರವು ನೆವದಲ್ಲಿ ಏನು ಮಾಡಿದರೂ ಲಾಭವೇ. ಹೀಗಾಗಿ ರಾಜಕೀಯ ಪ್ರವಾಹ ಧುಮ್ಮಿಕ್ಕಿ ಹರಿಯುವುದಕ್ಕೆ ಅವಕಾಶವಾಗಿದೆ.

ಆಡಳಿತ ಪಕ್ಷ ಆತ್ಮಮರುಕತನದ ಮಾತನಾಡುತ್ತಿದೆ. ಸಹಾಯಕ್ಕಾಗಿ ಜನತೆಯ ಮುಂದೆ ಕೈಚಾಚುತ್ತಿದೆ. ಪರಿಹಾರ ನೀಡುವುದಕ್ಕೆ ಮಾನದಂಡಗಳ ಬಗ್ಗೆ ಯೋಚಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಖಜಾನೆಯಲ್ಲಿ ಪರಿಹಾರಕ್ಕೆ ಸಾಕಾಗುವಷ್ಟು ದುಡ್ಡು ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಕಾದಷ್ಟು ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಇದಕ್ಕಿಂತ ಅವರು ಕೇಂದ್ರದಿಂದ ಹಣ ಪಡೆಯುವ ಚಾಕಚಕ್ಯತೆ ತೋರಬೇಕಿತ್ತು. ರಾಜಕೀಯದ ಮಾತು ಬಿಟ್ಟು ನೆರೆಪೀಡಿತ ಜನರ ನೆರವಿಗಾಗಿ ತಮ್ಮ ಪ್ರತಿಷ್ಠೆ, ಇಗೋ ತೊರೆದು ಒಬ್ಬ ನಿಜವಾದ ಜನಪ್ರತಿನಿಧಿಯಾಗಿ ದನಿ ಎತ್ತಬೇಕಿತ್ತು. ಬದಲಾಗಿ ಅವರು ರಾಜಕೀಯ ಮಾತನ್ನಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರು ಪ್ರತಿನಿಧಿಸುವ ಪಕ್ಷದೊಳಗೇ ಕೆಲವರು ಪರಿಹಾರ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿಲ್ಲ. ಅದರಲ್ಲೂ ಅನಂತಕುಮಾರ್ ಗ್ಯಾಂಗ್ ಯಾಕೊ ಅಷ್ಟು ಚುರುಕಾಗಿ ಓಡಾಡುತ್ತಿಲ್ಲ. ಇದು ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಸಾಕ್ಷಿ. ಅದು ಹಾಗಿರಲಿ.

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಜನನಾಯಕನಿಗೆ ರೈತರೇ ಹೆಚ್ಚಾಗಿ ಸಂಕಷ್ಟಕ್ಕೆ ಈಡಾಗಿರುವ ಈ ಸಂದರ್ಭದಲ್ಲಿ ಬೇರೆಯದೇ ರೀತಿಯ ಕಾಳಜಿ ಇರಬೇಕಿತ್ತು. ಆ ಕಾಳಜಿಯನ್ನು ಕಾರ್ಯಗತಗೊಳಿಸುವುದಕ್ಕೆ ಬೇರೆಯದೇ ಕಾರ್ಯವೈಖರಿ ಇರಬೇಕಿತ್ತು. ಅದು ಕಾಣಿಸುತ್ತಿಲ್ಲ.

ಈಗಿನ ಸಂದರ್ಭದಲ್ಲಿ ಕೇಂದ್ರ ಅಥವಾ ಇತರೆ ಯಾವುದೇ ಮೂಲಗಳಿಂದ ಬೇಕಾದ ಸಂಪನ್ಮೂಲ ಕ್ರೋಢೀಕರಿಸಲು ಸಾಕಷ್ಟು ಅವಕಾಶಗಳಿವೆ. ಆ ಯತ್ನ ಮಾಡಿದರು ಕೂಡ. ಆದರೆ, ಅದು ತೀರ ರಾಜಕೀಯ ಪ್ರೇರಿತ ಎನಿಸಿದ್ದು ಎದ್ದು ಕಾಣುವ ಸತ್ಯ. ಹಣ ಸಂಗ್ರಹಕ್ಕೆಂದು ಬೆಂಗಳೂರನ್ನೇ ಪ್ರಮುಖವಾಗಿಟ್ಟುಕೊಂಡು ಸುತ್ತಾಡಿ ಕೋಟ್ಯಂತರ ಹಣ ಸಂಗ್ರಹಿಸಿ ಷಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುವುದರ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನೆರಳಿತ್ತು. ನಗರದ ಜನರ ಸಿಂಪತಿ ಗಿಟ್ಟಿಸಿಕೊಳ್ಳುವ ಯತ್ನವಿತ್ತು. ಅದು ಎಂಥವರಿಗೂ ಕಾಣಿಸುವಂಥ ನಗ್ನಸತ್ಯವಾಗಿತ್ತು. ಕೇಂದ್ರಕ್ಕೆ ಹಣ ಕೊಡುವ ಮನಸ್ಸಿಲ್ಲ, ನಮ್ಮ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿದೆ, ರಾಜ್ಯದ ಜನತೆಯೇ ಇಂಥ ಕಷ್ಟಕ್ಕೆ ನೆರವಾಗಬೇಕು ಎಂದು ಹೇಳುವ ಯತ್ನವೂ ಇತ್ತು. ಕೋಟ್ಯಂತರ ಹಣ ಸಂಗ್ರಹಿಸಿ ತಾವೇ ಪರಿಹಾರ ಕಾರ್ಯಕ್ಕೆ ಸಮರೋಪಾದಿಯಲ್ಲಿ ತೊಡಗಿ ಕೇಂದ್ರಕ್ಕೆ ತಮ್ಮ ತಾಕತ್ತು ಪ್ರದರ್ಶಿಸುವ ಹುಂಬತನವೂ ಇತ್ತು.

ಆದರೆ, ವಾಸ್ತವದಲ್ಲಿ ರಾಜ್ಯ ತನ್ನಷ್ಟಕ್ಕೆ ತಾನೇ ಹಣದ ವ್ಯವಸ್ಥೆ ಮಾಡುವುದು ಸುಲಭವೂ ಆಗಿರಲಿಲ್ಲ. ಏಕಾಂಗಿಯಾಗಿ ಇದನ್ನು ಎದುರಿಸುವಷ್ಟು ಅನುಭವವೂ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಕೂಡ ರಾಜ್ಯದ ಸ್ಥಿತಿ ಮತ್ತು ಇಲ್ಲಿನ ಸರ್ಕಾರ ಇಂಥ ಸೂಕ್ಷ್ಮ ಮತ್ತು ಜಟಿಲ ಸ್ಥಿತಿ ಎದುರಿಸುವಲ್ಲಿ ಎಷ್ಟು ಅಶಕ್ತವಾಗಿದೆ ಎಂದು ಜನತೆಗೆ ತೋರಿಸುವ ತಂತ್ರ ಬಳಸಿತು. ಇದು ರಾಜಕೀಯ ದಾಳ ಪ್ರತಿದಾಳವಲ್ಲದೆ ಬೇರೆ ಇನ್ನೆನೂ ಅಲ್ಲ....

ಮಠಗಳಿಗೆ ಬೇಕಾದಷ್ಟು ದುಡ್ಡು ಚೆಲ್ಲಿದ ಯಡಿಯೂರಪ್ಪ, ಖಜಾನೆಯ ಬಗ್ಗೆ ಆಗ ಯೋಚಿಸಲೇ ಇಲ್ಲ. ಯಾವ ನಿಯಮಾವಳಿಗಳು, ಕಟ್ಟುಪಾಡುಗಳು ಆಗ ಲೆಕ್ಕಕ್ಕೇ ಬರಲಿಲ್ಲ. ಹಾಗೆ ಒಂದು ನಿರ್ಧಿಷ್ಟ ಹಿತಾಸಕ್ತಿಯ ಉದ್ದೇಶಗಳಿಗೆ ಬೊಕ್ಕಸ ಬಳಸಿಕೊಳ್ಳುವುದು ಅನಿವಾರ್ಯವಾಗಿತ್ತಾ ಎಂದು ಯೋಚಿಸಲಿಲ್ಲ. ಅಂಥ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರ್ವಪಕ್ಷಗಳ ಜತೆ ಚರ್ಚಿಸಲೂ ಇಲ್ಲ.ಈಗಲೂ ಅಷ್ಟೇ. ಪ್ರವಾಹದಿಂದ ಜನ ತತ್ತರಿಸುತ್ತಲಿದ್ದರೆ ಒಂದು ನಿರ್ಧಿಷ್ಟ ಕಾರ್ಯತಂತ್ರ ರೂಪಿಸಿ ತಕ್ಷಣ ಕಾರ್ಯರೂಪಕ್ಕಿಳಿಯಬೇಕಿತ್ತು. ಪ್ರತಿಪಕ್ಷ ಅಥವಾ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಕಾರ್ಯದ ಸ್ಪಷ್ಟ ಕಾರ್ಯತಂತ್ರ ರೂಪಿಸಬೇಕಿತ್ತು. ಅದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಮಾನ ಜವಾಬ್ದಾರಿ ವಹಿಸಿ, ತಾವೇ ಸ್ವತಃ ನಿರ್ದೇಶನ ಮಾಡುತ್ತ, ಜನರ ಸಾಂತ್ವನಕ್ಕೆ ನಿಲ್ಲಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಒಬ್ಬರೇ ಹೆಲಿಕಾಪ್ಟರ್ ಹತ್ತಿ ಸುತ್ತಾಡಿ, ಕಿಟಕಿಯಿಂದ ಇಣುಕಿದ ನಂತರವೇ ಸರ್ವಪಕ್ಷ ಸಭೆ, ಮತ್ತಿತರ ಕ್ರಮಗಳ ಬಗ್ಗೆ ಲೇಟಾಗೇ ನಿರ್ಧಾರಕ್ಕೆ ಬಂದರು.

ಒಂದೇ ಪಕ್ಷದ ಕಾರ್ಯಕರ್ತರನ್ನಿಟ್ಟುಕೊಂಡು ಹಣ ಸಂಗ್ರಹಿಸಿ ಪರಿಹಾರ ಸುಲಭವಾಗಿಸಲು ಸಾಧ್ಯವಿತ್ತೇನು? ತಕ್ಷಣಕ್ಕೆ ಒಂದು ಕಾರ್ಯಪಡೆ ರೂಪಿಸಿಕೊಂಡು ಪ್ರತಿಪಕ್ಷ, ಇತರ ರಾಜಕೀಯ ಪಕ್ಷಗಳ ಮುಖಂಡರನ್ನು ಅದರಲ್ಲಿ ಸೇರಿಸಿಕೊಂಡು ಜನತೆಯ ನೆರವಿಗೆ ನಿಂತಿದ್ದರೆ, ಪೀಡಿತ ಜನರಲ್ಲಿ ಬೇರೆಯದೇ ಜೀವಪ್ರೀತಿ ಉಕ್ಕುತ್ತಿತ್ತು. ಅದು ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿತ್ತು.

ಅದುಬಿಟ್ಟು ಪರಿಹಾರ ಕಾರ್ಯದಲ್ಲೂ ರಾಜಕೀಯ ಲಾಭಕ್ಕೆ ಲೆಕ್ಕಾಚಾರ ಹಾಕಿ, ಕೇವಲ ಹಣ, ಆಹಾರ ಪೊಟ್ಟಣಗಳ ಎಸೆಯುವುದರಿಂದ ಜನತೆಗೆ ಆದ ನಷ್ಟ ಭರಿಸಿಕೊಡುತ್ತೇವೆ ಎನ್ನುವುದು ಭ್ರಮೆ.

ಪೀಡಿತ ಜನರಿಗೆ ಅವರ ಬದುಕಿನ ಮೌಲ್ಯ, ಸ್ವಾಭಿಮಾನ ಉಳಿಸಿಕೊಂಡೇ ತತ್ ಕ್ಷಣದ ನೆರವಿಗೆ ನಿಲ್ಲುತ್ತಿದ್ದೇವಷ್ಟೆ ಎನ್ನುವ ವಿಶ್ವಾಸ ಮೂಡಿಸಬೇಕಿತ್ತು. ರಾಜಕೀಯ ಬದಿಗಿಟ್ಟು ತುಂಬ ಕಳಕಳಿಯಿಂದ ಮಾಡುವಂಥ ಕೆಲಸ ಇದು. ಯಡಿಯೂರಪ್ಪ ತಾವೊಬ್ಬ ಮುಖ್ಯಮಂತ್ರಿ ಎಂದುಕೊಂಡು ಇದರಲ್ಲಿ ತೊಡಗಿಕೊಳ್ಳುವ ಬದಲು, ಬಿಜೆಪಿ ನಾಯಕ ಎಂದು ಪಾಲ್ಗೊಳ್ಳಲು ನೋಡಿದರು. ಈ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳುವ ಮತ್ತು ಮುಂದೆ ದೊಡ್ಡ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆ ಈ ಮೂಲಕ ಏನಾದರೂ ಸಾಧ್ಯವೇ ಎಂದು ಯೋಚಿಸಿದರು. ಅವರ ಈಗಿನ ನಡೆ ನೋಡಿದರೆ ಹಾಗೇ ಅನಿಸುತ್ತದೆ.

ನೆರೆಪೀಡಿತ ಜನರ ಅಸಹಾಯಕ ಸ್ಥಿತಿಗೆ ನಾವು ತೋರುತ್ತಿರುವ ಔದಾರ್ಯ ಮಾತ್ರ ಎನಿಸದಂತೆ ನಡೆದುಕೊಳ್ಳುವುದು ಮುಖ್ಯ. ಆತಂಕ, ಜೀವಭಯದಲ್ಲಿದ್ದವನಿಗೆ ನಿನ್ನ ಜೀವವೂ ನನ್ನ ಹಾಗೆ ಮುಖ್ಯ; ನೀ ಬದುಕಿದರೆ ನಾನೂ ಬದುಕೇನು ಎನ್ನುವ ಕಕ್ಕುಲಾತಿ ಮುಖ್ಯ. ಆದರೆ, ಅಂಥದೊಂದು ನಡಾವಳಿ ಸರ್ಕಾರ ಅಥವಾ ರಾಜಕೀಯ ಸಂಘಟನೆಗಳಲ್ಲಿ ಕಾಣಿಸಲೇ ಇಲ್ಲ. ಇದು ಅತ್ಯಂತ ದುರದೃಷ್ಟಕರ.

ಮಠಗಳೂ ಕೂಡ ಇದರಲ್ಲಿ ತಮ್ಮ ಭಕ್ತರ ಉಳಿಸಿಕೊಳ್ಳುವ ಕಾಳಜಿ ತೋರಿದವೇ ವಿನಃ ಒಟ್ಟು ಮಾನವೀಯ ನೆಲೆಯಲ್ಲಿ ವಿಶಾಲ ಮನೋಭಾವನೆಯನ್ನೇ ತೋರಲಿಲ್ಲ. ಮಂತ್ರಾಲಯ ಮಠ ತನ್ನ ಸ್ವಾಮೀಜಿ ರಕ್ಷಣೆಗೆ ಹೆಚ್ಚು ಒತ್ತು ಕೊಟ್ಟಿತು. ಸರ್ಕಾರವೂ ತಕ್ಷಣಕ್ಕೆ ಸ್ಪಂದಿಸಿತು. ಇಲ್ಲಿ ಮಠಗಳಿಗೆ ಬೇಸ್ ಕಳಕೊಳ್ಳುವ ಭಯ ಕಾಡಿದ್ದು ಸ್ಪಷ್ಟ. ಇಡೀ ಮಂತ್ರಾಲಯ ಬೆಳೆದಿದ್ದೇ ಜನತೆಯ ದುಡ್ಡಿನಿಂದ ಅಲ್ವೇ? ಭಕ್ತರ ಮೊದಲು ಉಳಿಸುವುದು ಸ್ವಾಮೀಜಿ ಮತ್ತವರ ಟ್ರಸ್ಟ್ ಪ್ರಮುಖ ಗುರಿಯಾಗಬೇಕಿತ್ತು. ಕಾಳಜಿಯಾಗಬೇಕಿತ್ತು. ಆದರೆ ಇಲ್ಲಿ ಆದದ್ದು ತಮ್ಮ ಪೀಠ ಮತ್ತು ಜೀವ ರಕ್ಷಣೆ. ಹೀಗಾಗಿ ಧರ್ಮವೂ ಈ ವಿಷಯದಲ್ಲಿ ಜನರ ಜೀವ ಕಾಳಜಿಯನ್ನು ಪ್ರಮುಖವಾಗಿಸಿಕೊಳ್ಳಲಿಲ್ಲ ಎನ್ನುವುದು ಸ್ಪಷ್ಟ.

ಪೇಜಾವರ ಮತ್ತು ಧರ್ಮಸ್ಥಳ ಮಠಗಳು ನೆರವಿಗೆ ಮುಂದೆ ಬಂದಿದ್ದು ತಮ್ಮ ಭಕ್ತರ ಉಳಿಸಿಕೊಳ್ಳುವ ಕಸರತ್ತಾಗಿ ಕಂಡಿತೇ ವಿನಃ ವಿಶಾಲ ತಳಹದಿಯ ಮಾನವೀಯ ಕಾಳಜಿ ಎನಿಸಲಿಲ್ಲ. ತಲೆ ತಲಾಂತರದಿಂದ ಈ ಮಠಗಳಿಗೆ ಧಾರಾಕಾರವಾಗಿ ಹರಿದು ಬಂದಿದ್ದು ಜನತೆಯ ದುಡ್ಡು. ಅದರಲ್ಲೂ ರಾಜ್ಯದ ಉತ್ತರ ಭಾಗದ ಜನತೆ ಈ ಮಠಗಳ ಬೊಕ್ಕಸ ತುಂಬುತ್ತಲೇ ಬಂದಿದ್ದಾರೆ. ಎಷ್ಟೊ ಜನ ತಮಗೇ ಗಂಜಿಗೂ ಗತಿ ಇಲ್ಲದಿದ್ದ ಸಂದರ್ಭದಲ್ಲೂ ದೇವರೇ ಮುನಿಸಿಕೊಂಡಿದ್ದಾನೆಂದು ಆತನ ಮೇಲೆ ನಂಬಿಕೆಯಿಟ್ಟು ಈ ಮಠಗಳ ಡಬ್ಬಿ ತುಂಬಿದ್ದಾರೆ. ಡಬ್ಬಿಗಳಲ್ಲಿನ ಅವರದೇ ಒಂದಷ್ಟು ಭಾಗವನ್ನು ಇಂಥ ಸೂಕ್ಷ್ಮ ಸಂದರ್ಭದಲ್ಲಿ ಅವರಿಗೇ ಮುಟ್ಟಿಸುವ ಸಹಜವಾದ ಸಣ್ಣ ಜವಾಬ್ದಾರಿ ಈ ಮಠಗಳದ್ದಾಗಬೇಕಿತ್ತು. ನಾವು ಲಕ್ಷ ಮನೆ ಕಟ್ಟಿಸುತ್ತೇವೆ, ಕೋಟಿ ದುಡ್ಡು ಕೊಡ್ತೇವೆ ಎಂದು ಮಾಧ್ಯಮಗಳ ಮುಂದೆ ಪ್ರಚಾರಕ್ಕಾಗಿ ಚಂಡೆ ಬಾರಿಸುವ ಅಗತ್ಯ ಇರಲೇ ಇಲ್ಲ. ಯಾಕೆಂದರೆ ಈ ದುಡ್ಡು ಮಠಗಳ ಭಕ್ತರದೇ ವಿನಃ ಮಠವೇ ದುಡಿದು ಗಳಿಸಿದ್ದಲ್ಲ. ಹೀಗಾಗಿ ಮೆಹರ್ಬಾನಗಿ ಎಲ್ಲಿಂದ ಬಂತು? ಕೆರೆಯ ನೀರನು ಕೆರೆಗೆ ಚೆಲ್ಲುವಂತೆ ದಾಸರೇ ಹೇಳಿಲ್ಲವೇನು?

ಯಡಿಯೂರಪ್ಪ ಸರ್ಕಾರ ಬಂದಾಗಿನಿಂದ ರೈತರಿಗೆ ದಕ್ಕಿದ ಮೊದಲ ಗೌರವವೇ ಗೋಲಿಬಾರ್! ಈಗ ಅತಿವೃಷ್ಟಿಯ ಭೀಕರ ಸ್ಥಿತಿ!... ರಾಜ್ಯದ ಬಹುತೇಕ ಕೃಷಿ ಭಾಗವೇ ಉತ್ತರದಲ್ಲಿದೆ. ಮುಖ್ಯಮಂತ್ರಿಗಳ ಆಪರೇಷನ್ ಕಮಲ್ ಗೆ ಸಾಥ್ ಕೊಟ್ಟ ಪಕ್ಷದ ನಾಯಕರೂ ಹೆಚ್ಚಾಗಿ ಈ ಭಾಗದವರೇ. ಯಡಿಯೂರಪ್ಪನವರ ಕೋಮಿನವರೇ ಬಹುಸಂಖ್ಯೆಯಲ್ಲಿ ಹಾನಿಗೊಳಗಾಗಿದ್ದಾರೆ. ಹೀಗಾಗಿ ವೈಯಕ್ತಿಕವಾಗಿಯೂ ಯಡಿಯೂರಪ್ಪನವರಿಗಿದು ಪ್ರತಿಷ್ಠೆಯ ಪ್ರಶ್ನೆ.

ಕಟ್ಟಕಡೆಯ ಸತ್ಯವೇನೆಂದರೆ, ಬರಿಯ ಸಾಂತ್ವನದಿಂದ ಮತ್ತು ಆ ಕ್ಷಣದ ಧನ ಸಹಾಯದಿಂದ ನೆರೆಪೀಡಿತ ಜನರ ಬವಣೆ ನೀಗುವುದಿಲ್ಲ. ಅದಕ್ಕೆ ಶಾಶ್ವತ ಪರಿಹಾರವೂ ಬೇಕು. ಶಾಶ್ವತ ಪರಿಹಾರ ಎನ್ನೋದು ಎಷ್ಟರಮಟ್ಟಿಗೆ ಸಾಧ್ಯ? ಈ ಬಗ್ಗೆ ಹೆಚ್ಚು ಚಿಂತನೆ ನಡೆಯಬೇಕಲ್ಲದೇ ಬರಿಯ ರಾಜಕೀಯ ಮಾಡುವದಲ್ಲ ಎನ್ನುವುದು ಯಾವಾಗ ನಮ್ಮ ನಾಯಕರ ಅರಿವಿಗೆ ಬರುತ್ತೊ?
ಕೃಪೆ: ದಿಲ್ ಕೀ ಬಾತ್ ವರ್ಡ್ ಪ್ರೆಸ್ ಡಾಟ್ ಕಾಮ್

Tuesday, July 7, 2009

ಮೈಕಲ್ ಜಾಕ್ ಸನ್ : ಆಖರೀ ಸಲಾಂ



ಶನಿವಾರದ ಸೂರ್ಯ ಮುಳುಗುತ್ತಿದ್ದ ಹೊತ್ತು


ನನ್ನ ಮಗುವಿನೊಂದಿಗೆ ಹೊರಟು ನಿಂತಿರುವೆ ಹೊಸ ಸೂರ್ಯ ಮೂಡುವ ದಿಕ್ಕಿನೆಡೆಗೆ.


ಮಗು ಗಂಡೊ ಹೆಣ್ಣೊ? ಯಾವುದಾದರೇನು ಸ್ವಾಮಿ, ಎಲ್ಲ ಒಂದೇ.. ಎರಡೂ ಅಂದುಕೊಳ್ಳಿ..


ನಾನು ಪವಾಡಗಳ ನಂಬುವೆ. ಈ ರಾತ್ರಿಯೇ ಆ ಪವಾಡ ನಡೆದುಹೋಗಿದೆ.


ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,


ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.


ನನ್ನ ಮಕ್ಕಳು ಶನಿವಾರದ ಸೂರ್ಯನ ಕುಂಡೆ ಮೇಲೆ ಬರೆ ಎಳೆದು,


ನಾಳಿನ ಸೂರ್ಯನ ಹಣೆಯ ಮೇಲೆ ನನ್ನ ಸಂದೇಶ ಬರೀತಾರೆ.


ನಾನ್ಯಾರಿಗೂ ಕಮ್ಮಿ ಅಲ್ಲ ಎಂದು.


ಮತ್ತು ನಾನವರಿಗೆ ಹೇಳಿದ್ದೇನೆ, ಸಮಾನತೆಯ ಬಗ್ಗೆ.


ನೀವು ಒಪ್ಪುತ್ತೀರೊ, ಬಿಡುತ್ತೀರೋ ಸಮಾನತೆಯೊಂದೇ ಸತ್ಯ.


ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,
ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.


ನಾನೀ ರಕ್ಕಸನ ಜತೆ ಸೆಣಸಿ ಹೈರಾಣಾಗಿರುವೆ.


ಗುದಮುರಗಿ ಹಾಕುತ್ತ ದಣಿದಿರುವೆ, ಈ ಉಸಾಬರಿಯಿಂದ ಸುಸ್ತಾಗಿರುವೆ


ಉಪಟಳ ಹೆಚ್ಚಾದಾಗೆಲ್ಲ ಅದರ ಕುಂಡೆ ಮೇಲೆ ಒದ್ದಿರುವೆ.


ಹೋರಾಟಕೆ ನಾನ್ಯಾರಿಗೂ ಅಂಜೆನು, ನಿಮ್ಮ ಶನಿ ಸಂತಾನಕೂ...


ಗುಂಪುಗಾರಿಕೆ, ಕ್ಲಬ್, ರಾಷ್ಟ್ರಗಳಿಗೇ ಎಲ್ಲಾ ರಕ್ಷಣೆ...


ಇಲ್ಲಿ ಕೇಳುವವರೇ ಇಲ್ಲ ಮನುಷ್ಯ ಕುಲದ ಬವಣೆ?


ಇದೆಲ್ಲ ಬೊಗಳೆ ವ್ಯವಹಾರ ಜಗದ ತುಂಬ. ಇದೆಲ್ಲ ಸುಮ್ಮನೇ ಯುದ್ಧ!


ಪರ ವಿರೋಧದ ಕಥೆ ಕೇಳಿ ಏನಾಗಬೇಕು? ಸತ್ಯ ತಿಳಕೋ...!


ಇದು ಬಣ್ಣದ ಯುದ್ಧವಲ್ಲ... ಬರಿಯ ಸಾಮ್ರಾಜ್ಯ ವಿಸ್ತರಣೆಯ ಕಸರತ್ತು.


ಇಲ್ಲಿ ಸ್ಥಳ ಮುಖ್ಯ ಮತ್ತು ಮುಖಗಳೂ...


ರಕುತದ ಹನಿ ಹುಟ್ಟುವ ಜಾಗದಿಂದಲೇ ನಿನ್ನದೇ ವಿಶ್ವ ತೆರಕೊಂಡಿದೆ, ಅದರ ಹರವು ಈ ವಿಶಾಲ ಆಕಾಶ!


ಬಿಳಿ ಬಣ್ಣ ಮಿಂಚು ಕಳಕೊಳ್ಳುವ ಸತ್ಯವ ನಾ ಕಂಡೆ. ಈ ಬಣ್ಣದ ಮೋಹಕ್ಕಾಗೇ ನಾ ಬದುಕ ವ್ಯರ್ಥಮಾಡಿಕೊಳ್ಳಲಾರೆ.


ನನ್ನ ಕಣ್ಣಿಗೆ ಮಣ್ಣೆರಚುವದ ಕಂಡಿರುವೆ, ಹೇಳದಿರಿ ನಿನ್ನ ಮಾತಿಗೆ ನಮ್ಮ ಸಹಮತ ಎಂದು..


ಕೇವಲ ಕನಿಕರದ ಮತ್ತು ಆತ್ಮಾನುಕಂಪದ ಇಂಥ ಬರಿಯ ಮಾತಿಗೆ ನಾ ಬೆಲೆ ಕೊಡಲಾರೆ.


ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ,


ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.


ನೀವು, ನಾನೇ ನಿನ್ನ ಕಂದ ಎಂದುಕೊಳ್ಳುವಿರಾದರೆ,


ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.


ನೀವು ನನ್ನ ಬಂಧು ಎಂದುಕೊಳ್ಳುವಿರಾದರೆ,


ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ.


ಈ ಕಪ್ಪು, ಬಿಳುಪು ಈ ಒಣಪು..


ಈ ಬಿಳುಪು, ಕಪ್ಪು ಈ ಒಣಪು..


ಕಷ್ಟ ಬಿಳುಪಾಗೋದು ಕಷ್ಟ ಕಪ್ಪಾಗೋದೂ...


ಕಪ್ಪು, ಬಿಳುಪು... ಇದು ಕಷ್ಟ... ಈ ಬಿಳುಪು, ಕಪ್ಪು..


ಹೀಗೆ ಕುಣಿತದ ಜತೆ ಬದುಕಿನ ಸಹಜ ಹಾಡು ಹೇಳುವ ಮೈಕಲ್ ಜಾಕ್ ಸನ್, ಮನುಷ್ಯ ಚಹರೆಗಳನ್ನು ತೋರಿಸುತ್ತ ಅದರ ತೊಗಲಿನ ಬಣ್ಣ ವೈವಿಧ್ಯ ಹೇಳುತ್ತ... ಬಣ್ಣದ ಮೋಹ ಪದರು ಕಳಚಿಹಾಕುತ್ತಾನೆ. ಕಡೆಗೆ ಮನುಷ್ಯನ ಅಸಲಿ ಗುರುತು, ಅವನ ಜೀವಂತಿಕೆ, ಜೀವಕಳೆ... ಈ ಬಣ್ಣದ ಮೇಲ್ಪದರ ಕಳಚಿ ನೋಡಿ ಅಲ್ಲಿ ಮನುಷ್ಯನ ನಗು, ಬುದ್ಧನ ನಗು, ಪೈಗಂಬರ ಮೊಹಮ್ಮದ್ ನಗು, ಜೀಸಸ್ ಗಾಡ್ ನಗು... ಮತ್ತು ನಿಮ್ಮ ನಗುವೂ ಮಿಂಚುತ್ತದೆ ಎನ್ನುವ ಆಶಯ ಹೇಳುತ್ತಾನೆ. ಈ ಹಾಡಿನ ತುಂಬ ಕರಿಯ-ಬಿಳಿಯ ಎನ್ನುವ ವರ್ಣಭೇದ ನೀತಿ ವಿರೋಧಿಸುವ ಮೈಕಲ್ ಜಾಕ್ ಸನ್ ಪೊಯಟ್ರಿ ಎನ್ನುವ ಮೇಲ್ವರ್ಗದ ಬೌದ್ಧಿಕ ಧಿಮಾಕಿನ ಹಂಗು ತೊರೆದು ಭಾವನೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಕಾವ್ಯ ನಾಚುವಂಥ ಹೊಸ ಪಥ ಹಿಡಿದಿದ್ದಾನೆ. ಹೀಗೆ ಎಲ್ಲವೂ ಸಹಜ, ಸರಳವಾಗಿರಬೇಕು, ಅದುವೇ ಸತ್ಯ, ಅದುವೇ ಸುಂದರ.. ಶ್ರೇಷ್ಠ ಎಂದು ಹೇಳಲು ಯತ್ನಿಸುತ್ತಾನೆ. ಮೈಕಲ್ ಜಾಕ್ ಸನ್ ನನಗೆ ಹೀಗೆ ಅರ್ಥವಾದ ಒಂದು ಪರಿಯನ್ನು ನಾನಿಲ್ಲಿ ಹಿಡಿದಿಟ್ಟಿರುವೆ ಅಷ್ಟೇ.


ಅಗಲಿದ ಆ ಮಹಾನ್ ಚೇತನಕ್ಕೆ ನನ್ನ ನಮನ. ದಿಲ್ ಪೂರ್ವಕ ಸಲಾಂ.


-ದಿಲಾವರ್ ರಾಮದುರ್ಗ

Saturday, May 16, 2009

ಸೋನಿಯಾ ವ್ಯಕ್ತಿತ್ವಕ್ಕೆ ಸಂದ ಗೌರವ ಈ ಫಲಿತಾಂಶ


ಮತ್ತೆ ಯುಪಿಎ ಸರ್ಕಾರ. ಕಾಂಗ್ರೆಸ್ ಈ ದೇಶದಲ್ಲಿ ಅದೆಷ್ಟು ಬೇರು ಬಿಟ್ಟಿದೆ ಅನ್ನೋದಕ್ಕೆ 2009ರ ಲೋಕಸಭಾ ಚುನಾವಣೆ ಒಂದು ಉದಾಹರಣೆ. ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೈ ಕಮಾಲ್ ತೋರಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅದರ ಈ ಸಲದ ಸಾಧನೆ ಗಮನಾರ್ಹ. ಇಲ್ಲಿ ನೆಲೆಯನ್ನೇ ಕಳೆದುಕೊಂಡಂತಿದ್ದ ಕಾಂಗ್ರೆಸ್ ಮತ್ತೆ ಮೈ ಕೊಡವಿ ಎದ್ದು ನಿಂತಿದೆ.
ಸೋನಿಯಾ ತುಂಬ ಸಂಯಮ ವಹಿಸಿ, ಶಾಂತ ಚಿತ್ತದಿಂದ ದೇಶವನ್ನು ಮುನ್ನಡೆಸಿಕೊಂಡು ಹೋಗಿದ್ದು ಬಹುಮುಖ್ಯ ವಿಚಾರ. ತಮ್ಮ ಇತಿ ಮಿತಿಯ ರಾಜಕೀಯ ಅನುಭವದಲ್ಲಿ ಬಹುಶಃ ಈ ಹಿಂದೆ ಯಾವ ರಾಜಕಾರಣಿಯೂ ತೋರದ ಮುತ್ಸದ್ದಿತನ ಮೆರೆದರು. ಮನಮೋಹನ್ ಸಿಂಗ್ ಎನ್ನುವ ಸಾತ್ವಿಕ ಮನುಷ್ಯನನ್ನು ಪ್ರಧಾನಿ ಕುರ್ಚಿ ಮೇಲೆ ಕೂರಿಸಿ ಹಿಂದೆ ತಾವೇ ನಿಂತು ಎಲ್ಲವನ್ನು ಸುಸೂತ್ರವಾಗಿ ನಿಭಾಯಿಸಿದರು. ಮನೆಯ ಹಿರಿಯ ಮಗಳು ಇಡೀ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾಳಲ್ಲ, ಹಾಗೆ ದೇಶವನ್ನು ಮುನ್ನಡೆಸಿದರು.
ಕಾಂಗ್ರೆಸ್ ಬಗ್ಗೆ ಜನರಿಗೆ ಒಲವು ಇನ್ನೂ ಮಾಸಿಲ್ಲ, ಆದರೆ ಅದಕ್ಕೂ ಹೆಚ್ಚಾಗಿ ಸೋನಿಯಾ ವ್ಯಕ್ತಿತ್ವ ಈಗ ಎಲ್ಲರಿಗೂ ಒಪ್ಪಿಗೆಯಾಗಿದ್ದಕ್ಕೆ ಸಾಕ್ಷಿಯಂತೆ ಈ ಫಲಿತಾಂಶ ಬಂದಿದೆ. ಮನಮೋಹನ್ ಸಿಂಗ್ ಅವರ ಕ್ಲೀನ್ ವ್ಯಕ್ತಿತ್ವ, ಹಗರಣಗಳೇ ಇಲ್ಲದ ಒಂದು ಪೂರ್ಣಾವಧಿ ಅಧಿಕಾರ ನಿಭಾಯಿಸಿದ್ದು ಮತದಾರರಿಗೆ ಇಷ್ಟವಾಗಿದೆ. ಯಾವುದೇ ಅಂಥ ಅಹಿತಕರ ಗಲಭೆಗಳು ನಡೆಯದಂತೆ, ಅಕ್ರಮಗಳು ಜರುಗದಂತೆ ಎಚ್ಚರ ವಹಿಸಿದ್ದು ಯುಪಿಎ ಸಾಧನೆ. ಅದನ್ನೇ ಜನತೆ ಪರಿಗಣಿಸಿದ್ದಾರೆ.
ಅಮೆರಿಕ ಜತೆಗಿನ ಸಂಬಂಧ ಮತ್ತು ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿದಂತೆ 123 ಷರತ್ತುಗಳಿಗೆ ತಲೆಬಾಗಿದ ಯುಪಿಎ ಒಂದು ದೊಡ್ಡ ತಪ್ಪನ್ನೇ ಮಾಡಿತ್ತು. ಈ ವಿಷಯದಲ್ಲಿ ಎಡರಂಗ ತರಾಟೆಗೆ ತೆಗೆದುಕೊಂಡಿದ್ದು ಮತ್ತು ಅದನ್ನು ವಿರೋಧಿಸಿದ್ದು ಸೂಕ್ತವೇ ಆಗಿತ್ತು. ಮುಂಬೈ ಸ್ಫೋಟ ಪ್ರಕರಣದಂಥ ವ್ಯವಸ್ಥಿತ ಪಿತೂರಿಗಳಿಗೂ ಮತದಾರ ಬೆಲೆ ಕೊಡಲಿಲ್ಲ. ಅಥವಾ ಅದಾವುದನ್ನೂ ಮತದಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಎಡರಂಗ ನಂದಿಗ್ರಾಮದ ಗೊಲೀಬಾರ್ ಗೆ ದೊಡ್ಡ ಬೆಲೆ ತೆತ್ತಿತು. ಪಶ್ಚಿಮ ಬಂಗಾಳದಲ್ಲಿ ಹತಾಶ ಹೆಣ್ಣು ಮಮತಾ ಬ್ಯಾನರ್ಜಿಯ ಕಮ್ಯುನಿಸ್ಟ್ ಸರ್ಕಾರದ ಮೇಲಿನ ದ್ವೇಷದ ಹೆಗಲ ಮೇಲೆ ಕೂತು ಸೇಡು ತೀರಿಸಿಕೊಳ್ಳುವ ಆಯ್ಕೆ ಮಾಡಿದ ಕಾಂಗ್ರೆಸ್ ಅಂದುಕೊಂಡ ಆಟ ಆಡಿತು.

ಕಮ್ಯುನಿಸ್ಟರನ್ನು ಹ್ಯಾಗೆ ಸದೆ ಬಡಿಯಬೇಕು ಎನ್ನುವುದನ್ನು ಕಾಂಗ್ರೆಸ್ಸ್ಇಗರು ಇಂದಿರಾ ಕಾಲದಿಂದಲೇ ಚೆನ್ನಾಗಿ ಬಲ್ಲವರು. ಹೀಗೆ ಹಳೆಯ ತಲೆಗಳ ರಾಜಕೀಯ ಲೆಕ್ಕಾಚಾರ, ರಾಹುಲ್, ಸಚಿನ್ ಪೈಲಟ್ ರಂಥ ಹೊಸ ಹುರುಪಿನ ಹುಡುಗರ ಹೊಸ ಕನಸು.. ಎರಡನ್ನೂ ಸರಿಯಾಗಿ ನಿಭಾಯಿಸಿದ ಸೋನಿಯಾ ಗಾಂಧಿ ಎಲ್ಲರ ಮೆಚ್ಚುಗೆಗೆ, ಪ್ರೀತಿಗೆ ಪಾತ್ರರಾದರು. ಸೋನಿಯಾ ಮಾಡಿದ ಾಯ್ಕೆ ಮನಮೋಹನ್ ಸಿಂಗ್ ಅವರನ್ನು ಇಡೀ ದೇಶವೇ ಒಪ್ಪಿಕೊಂಡಿತು. ವಿದೇಶಿ ಮಹಿಳೆ ಎಂಬ ಹಣೆಪಟ್ಟಿ ಕಿತ್ತು ಬೀಸಾಕಿದ ಜನತೆ, ಸೋನಿಯಾರನ್ನು ತಮ್ಮ ನಾಯಕಿ ಎಂದು ಒಪ್ಪಿಕೊಂಡಿತು. ಈ ಅಂಶಗಳು ಕಾಂಗ್ರೆಸ್ ಕಡೆಗೆ ಮತ್ತೆ ತಿರುಗಿ ನೋಡುವಂತಾಯಿತು. ಹೊಸ ಸರ್ಕಾರದ ಮುಂದಿನ ಸವಾಲುಗಳು ಎಂದಿನಂತೆ ಇದ್ದೇ ಇರುತ್ತವೆ. ಮನಮೋಹನ್ ಎಷ್ಟು ಕಾಲ ಜತೆಯಲ್ಲಿದ್ದವರನ್ನು ವಿಶ್ವಾಸದಿಂದ ಕೊಂಡೊಯ್ಯುತ್ತಾರೊ ಅಲ್ಲಿಯತನಕ ಯಾವ ತೊಂದರೆ ಇಲ್ಲದೇ ಆಡಳಿತ ನಡೆಸುತ್ತಾರೆ. ಮತ್ತೊಂದು ಅವಧಿಯವರೆಗೆ ಸಿಂಗ್ ಕುರ್ಚಿ ಮೇಲಿರುವರೇ? ಅವರ ಆರೋಗ್ಯ ಸ್ಥಿತಿ ಮತ್ತು ಮಹಾತ್ವಾಕಾಂಕ್ಷಿ ಇತರ ನಾಯಕರ ಸಂಯಮದ ಸ್ಥಿತಿ ಮೇಲೆ ಅವಲಂಬಿಸಿದೆ. ಆದರೆ ಮತ್ತೊಂದು ನಿರುಪದ್ರವಿ ಸರ್ಕಾರ ಕೇಂದ್ರದಲ್ಲಿ ಬರುತ್ತಿದೆ ಎನ್ನುವುದು ಸಮಾಧಾನಕರ.