ಅಮೆರಿಕ ಅಧ್ಯಕ್ಷ ಬುಷ್ ಗೆ ಇದೆಲ್ಲ ಆಗಬೇಕಾದ್ದೇ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳಲು ಹೊರಟಾಗೆಲ್ಲ ಇಂಥ ಶಿಕ್ಷೆಗೆ ಗುರಿಯಾಗುತ್ತಲೇ ಬಂದಿದ್ದಾರೆ. ಅಮೆರಿಕ ಈತನಕ ತನ್ನ 'ದೊಡ್ಡಣ್ಣ'ನ ಪಾತ್ರದಿಂದ ಹಿಂದೆ ಸರಿದದ್ದೇ ಇಲ್ಲ. ಜಗತ್ತಿನ ಎಲ್ಲರ ತಲೆಯ ಮೇಲೆ ತನ್ನ ಬೂಟುಗಳನ್ನು ಮೆಟ್ಟುವ ಕೆಲಸ ಮಾಡುತ್ತಲೇ ಸಾಗುತ್ತಿದೆ. ಅದು ವಿಯೆಟ್ನಾಂ ಆಗಿರಬಹುದು, ಆಫ್ಘಾನಿಸ್ತಾನ್ ಅಥವಾ ಇರಾಕ್ ಆಗಿರಬಹುದು... ಎಲ್ಲೆಂದರಲ್ಲಿ ತನ್ನ ಹುಕುಮತ್ ಚಲಾಯಿಸಲು ಮುಂದಾಗುವುದು ಅದರ ಚಾಳಿ.
ಅಮೆರಿಕಕ್ಕೆ ತನ್ನ ಡಾಲರ್ ಸೊಕ್ಕು ಎಲ್ಲವನ್ನು ದಕ್ಕಿಸಿಕೊಳ್ಳುತ್ತದೆ ಎನ್ನುವ ಭ್ರಮೆ ಇದೆ. ಅದರಿಂದ ಅದು ತನಗೆ ಬೇಕಾದ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ರೂಪಿಸುತ್ತದೆ. ತಂತ್ರಜ್ಞಾನವನ್ನು ತನ್ನ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುತ್ತದೆ. ಯುದ್ಧದಂಥ ಪರ್ಮನೆಂಟ್ ಇನಸ್ಟಿಟ್ಯೂಟ್ ಅನ್ನು ಅದು ರೂಪಿಸುತ್ತದೆ. ಅದನ್ನು ಒಂದು ಲಾಭದಾಯಕ ಸಂಸ್ಥೆಯಾಗಿ ಬೆಳೆಸುತ್ತದೆ. ಶಸ್ತ್ರಾಸ್ತ್ರಗಳ ತಯಾರಿಕೆಯ ಮೂಲಕ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತದೆ. ನಮ್ಮಲ್ಲಿ ಫುಡ್ ಪ್ರೊಸೆಸಿಂಗ್ ಯುನಿಟ್ ಗಳಂತೆ ಮತ್ತು ಡಬ್ಬಿ ಅಂಗಡಿಗಳಲ್ಲಿ ಮಿರ್ಚಿ ಭಜ್ಜಿ ತಯಾರಿಸಿದಂತೆ ಅದು ಬಾಂಬ್, ಬಂದೂಕು ತಯಾರಿಸುತ್ತದೆ. ಮಕ್ಕಳು ಕಾಗದದಿಂದ ರಾಕೆಟ್, ವಿಮಾನ, ಹಡಗು ಮಾಡಿದಂತೆ ಯುದ್ಧ ವಿಮಾನಗಳನ್ನು, ನೌಕೆಗಳನ್ನು ಅದು ಸಿದ್ಧಪಡಿಸುತ್ತದೆ. ಅದರ ಶಕ್ತಿ ಪ್ರದರ್ಶನಕ್ಕೆ ಅಲ್ಲಲ್ಲಿ ಯುದ್ಧಗಳನ್ನು ಹುಟ್ಟುಹಾಕಿ ಅಟ್ಟಹಾಸಗೈಯುತ್ತದೆ.
ರೊಟ್ಟಿ, ಬೆಣ್ಣೆ ತಿಂದುಕೊಂಡು ಅಲ್ಲಲ್ಲಿ ಬೆಟ್ಟದ ತೊಪ್ಪಲಲ್ಲಿ ಬೇಕಾಬಿಟ್ಟಿಯಾಗಿ ಬೆಳೆಯುವ ಗಾಂಜಾ, ಅಫೀಮು ಮಾರಿಕೊಂಡು, ಒಳ್ಳೆಯದೊ ಕೆಟ್ಟದ್ದೊ ತನ್ನ ಪಾಡಿಗೆ ತಾನು ಬದುಕುತ್ತಿದ್ದ ಆಫ್ಘನ್ ರನ್ನು ರಷ್ಯ ವಿರುದ್ಧ ಎತ್ತಿಕಟ್ಟಿ ತನ್ನ ಕಮ್ಯುನಿಸ್ಟ್ ವಿರೋಧಿ ತೆವಲನ್ನು ತೀರಿಸಿಕೊಂಡಿತು ಅಮೆರಿಕ. ಆಗ ರಷ್ಯ ವಿರುದ್ಧ ಸಿಐಎ ಏಜೆಂಟ್ ಆಗಿ ಬಳಕೆಯಾದ ವ್ಯಕ್ತಿಯೇ ಇಂದು ಒಸಾಮಾ ಬಿನ್ ಲಾಡೆನ್ ಆಗಿ ಅದಕ್ಕೇ ಸಿಂಹಸ್ವಪ್ನ ಆಗಿದ್ದಾನೆ. ತಾಲಿಬಾನ್ ಗಳಿಗೆಲ್ಲ ಕಳ್ಳ ಮಾರ್ಗದ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡಿ ಅವರನ್ನು ಅವರ ಜನರ ವಿರುದ್ಧವೇ ಎತ್ತಿಕಟ್ಟಿ, ಧರ್ಮ, ಅಂಧಾನುಕರಣೆಯಂಥ ಅಫೀಮುಗಳನ್ನು ಇಂಜೆಕ್ಟ್ ಮಾಡಿ ಇಡೀ ಆಫ್ಘನ್ ನೆಲವನ್ನು ಯುದ್ಧಭೂಮಿಯಾಗಿ, ಸಮರಕಲೆಯ ಅಭ್ಯಾಸ ತಾಣವನ್ನಾಗಿಸಿದ್ದೇ ಅಮೆರಿಕ.
ಒಂದು ಸಾಮಾನ್ಯ ಬುಡಕಟ್ಟು ಜನಾಂಗದಿಂದ ಹೊರಹೊಮ್ಮಿದ್ದ ಸದ್ದಾಂ ಹುಸೇನ್ ಎನ್ನುವ ನಾಯಕನನ್ನು ಅವನದೇ ಶತ್ರುಗಳ ನೆರವಿನಿಂದ ಸದೆಬಡಿದು ಬೀಗುವ ಅಮೆರಿಕದ ಸಮರ ತಂತ್ರಗಳು, ರಾಜತಾಂತ್ರಿಕ ರಹಸ್ಯ ಕಾರ್ಯಸೂಚಿಗಳು ಅರ್ಥವಾಗುವಂಥವೇ. ಆದರೂ ಯಾಕೆ ಅದರ ವಿರುದ್ಧ ದೊಡ್ಡ ದನಿ ಏಳುವುದಿಲ್ಲ?
ಅದರ ಆರ್ಥಿಕ ಲಾಲಸೆಗಳೇ ಅಷ್ಟು ಪವರ್ ಫುಲ್ ಆಗಿರುತ್ತವೆ. ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಬಾಯ್ತೆರೆಯುವ ತೃತೀಯ ಜಗತ್ತಿನ ರಾಷ್ಟ್ರಗಳು ಅದರ ಅಂಧಾನುಕರಣೆ ಮತ್ತು ಆಮಿಷಗಳಿಗೆ ಬಲಿಯಾಗುತ್ತಲೇ ಸಾಗಿವೆ. ಭಾರತ ಮತ್ತು ಪಾಕಿಸ್ತಾನಗಳಿಗೆ ಇದರ ತಂತ್ರಗಳೇ ಅರ್ಥವಾಗುತ್ತಿಲ್ಲವೋ ಅಥವಾ ಅರ್ಥವಾಗಿಯೂ ದಾರಿ ತಪ್ಪುತ್ತಿವೆಯೊ ಎನ್ನುವುದು ದೊಡ್ಡ ಗೊಂದಲ.
ಭಾರತ ಹಿಂದೆ ಸೊವಿಯತ್ ಒಕ್ಕೂಟ (ಯುಎಸ್ಎಸ್ಆರ್)ದ ಜತೆ ಇಟ್ಟುಕೊಂಡ ಸಂಬಂಧದಿಂದ ಹಿಡಿದು ಈಗಿನ ರಷ್ಯ ಜತೆ ಎಂಐಜಿ ವಿಮಾನ ಖರೀದಿ ವಿಷಯದತನಕ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದೆ. ಭಾರತದ ಮೇಲೆ ಒಂದು ಕೆಂಗಣ್ಣು ಇಟ್ಟುಕೊಂಡೇ ಬಂದ ಅಮೆರಿಕಕ್ಕೆ ಈಗ ಶಸ್ತ್ರಾಸ್ತ್ರ ಖರೀದಿಸಬಲ್ಲ ದೊಡ್ಡ ಕ್ಲೈಂಟ್ ನ ಅಗತ್ಯವಿದೆ. ಭಾರತ ತನ್ನ ಕ್ಲೈಂಟ್ ಆಗಬೇಕು ಎನ್ನುವುದು ಅದರ ಉದ್ದೇಶ. ಏಷ್ಯ ರಾಷ್ಟ್ರಗಳಲ್ಲಿ ಬಲಾಡ್ಯ ಮತ್ತು ಸೂಪರ್ ಪಾವರ್ ಭ್ರಮೆಗಳನ್ನು ಹಲವು ರಾಷ್ಟ್ರಗಳ ತಲೆಗೆ ಸೇರಿಸುವ ಕೆಲಸವನ್ನೂ ಅದು ವ್ಯವಸ್ಥಿತವಾಗೇ ಮಾಡಿಕೊಂಡು ಬಂದಿದೆ. ಆಫ್ಘಾನಿಸ್ತಾನ ಮತ್ತು ಇರಾಕ್ ನಲ್ಲಿ ಮಾಡಿದ ತಂತ್ರವನ್ನೇ ಅದು ಭಾರತ ಮತ್ತು ಪಾಕಿಸ್ತಾನದಲ್ಲಿ ಮಾಡ ಹೊರಟಿದೆ. ಈ ಹುನ್ನಾರಗಳನ್ನು ಉಪಖಂಡ ಅರ್ಥಮಾಡಿಕೊಳ್ಳಬೇಕಿದೆ.
ಇರಾಕಿಗಳನ್ನು ಅವರ ನೆಲದಲ್ಲೇ ಮಣ್ಣುಮುಕ್ಕಿಸಿ ಅವರ ವಿರೋಧಿ ಇರಾನಿಯರ ಕೈಗೆ ದೇಶ ಕೊಟ್ಟಿದೆ. ಇರಾಕ್ ಪ್ರಧಾನಿ ನೂರಿ ಅಲ್ ಮಲಿಕಿ ಇರಾನ್ ಮೂಲದವ. ಸುಪ್ರೀಂ ಇರಾನಿಯನ್ ಬಟ್ ಕೌನ್ಸಿಲ್ ಮುಖ್ಯಸ್ಥ ಅಲ್ ಹಕೀಂ ಪುತ್ರ. ಅಲ್ ಮಲಿಕಿ ಕೆನ್ನೆಗೆ ಮುತ್ತಿಟ್ಟು ಬೆನ್ನುತಟ್ಟಿ ಷಹಬ್ಬಾಸ್ ಎನ್ನುವುದನ್ನು, ಕುರ್ದಿಷ್ ಪ್ರತಿನಿಧಿಗಳಂತೆ ಪೋಸು ಕೊಡುವ ಬರಜಾನಿ, ತಾರೀಕ್ ಅಲ್ ಹಷ್ಮಿ ಅವರನ್ನು ಬುಷ್ ಆಲಂಗಿಸಿ ಕ್ಯಾಮೆರಾಗೆ ಪೋಸು ಕೊಡುವುದನ್ನು ಕಂಡ ಕುದಿರಕ್ತದ ಯುವ ಇರಾಕಿ ಮುಂತಾಜಿರ್ ಅಲ್ ಜೈದಿ 'ಯಾ ಕಲ್ಬ್' (ಅರೆಬಿಕ್ ಭಾಷೆಯಲ್ಲಿ ಏಯ್ ನಾಯಿ ಎಂದು ಬೈಯ್ಯುವುದು) ಎನ್ನುತ್ತ ಬೂಟು ಎಸೆದ. ಇದು ಎಲ್ಲ ಶಿಷ್ಟಾಚಾರಗಳನ್ನು ಮೀರಿದ ವರ್ತನೆ. ಒಂದು ರಾಷ್ಟ್ರದ ಜನ ತಮ್ಮ ನೆಲದೊಳಗೇ ಗುಲಾಮರಂತೆ ಬದುಕುವುದನ್ನು ವಿರೋಧಿಸುವ ಕ್ರೋಧ. ಸರ್ವಾಧಿಕಾರಿಗಳ ಅಟ್ಟಹಾಸಕ್ಕೆ ತಲೆಕೆಟ್ಟು ನೀಡಿದ ಉತ್ತರ. ಪ್ರಜಾಪ್ರಭುತ್ವದ ಹೆಸರಲ್ಲಿ ಜನರನ್ನು ಶೋಷಿಸುವ, ಯುದ್ಧದ ಮೂಲಕ ಭಯೋತ್ಪಾದನೆ ಮಾಡುವ ಹುನ್ನಾರಕ್ಕೆ ಕೊಟ್ಟ ಚಪ್ಪಲಿ ಏಟು. ಮುಗ್ಧ ಜನರ ಮೇಲೆ ಬಾಂಬ್ ಎಸೆಯುವಾಗ, ದುರ್ಬಲರ ನೆತ್ತಿ ಮೇಲೆ ಬೂಟುಗಾಲನ್ನಿಟ್ಟು ದರ್ಪ ಮಾಡುವ ಮಿಲಿಟರಿ ಶಕ್ತಿಗೆ ಪ್ರತಿಯಾಗಿ ನೀಡಿದ ಸವಾಲು. ಇರಾಕಿ ಜನದನಿಯ ಕ್ರೋಧ... ಇಷ್ಟೆಲ್ಲ ವ್ಯಾಖ್ಯಾನಗಳು ಈಗಾಗಲೇ ಮಾರ್ದನಿಸುತ್ತಿವೆ.
ಬುಷ್ ಮುಖಕ್ಕೆ ಬೂಟು ಎಸೆದಿದ್ದು... ಇಡೀ ವಿಶ್ವ ಸಮುದಾಯವನ್ನು ತನ್ನ ಆರ್ಥಿಕ ಶಕ್ತಿಯೊಂದರಿಂದಲೇ ಬೆರಳ ತುದಿಯಲ್ಲಿ ಕುಣಿಸುತ್ತಿರುವ ಅಮೆರಿಕದ ಸ್ವಾರ್ಥ ಮನೋಧರ್ಮಕ್ಕೆ ಮತ್ತು ಬುಷ್ ಮಾಡಿದ ಅಧೀಕೃತ ಅಪರಾಧಗಳಿಗೆ ಸಾಮಾನ್ಯ ರಾಷ್ಟ್ರ ಮತ್ತು ಜನತೆಯ, ಶೋಷಿತರ ಆಕ್ರೋಶದ ಅಭಿವ್ಯಕ್ತಿ ಎನ್ನುವುದು ಈಗಿನ ಸತ್ಯ. ಅಮೆರಿಕಕ್ಕೆ ಇದೆಲ್ಲ ಅರ್ಥವಾಗದ್ದೇನೂ ಅಲ್ಲ. ಆದರೆ ಅದು ತನ್ನ ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಶಸ್ತ್ರಾಸ್ತ್ರ ಪೈಪೋಟಿ ಏರ್ಪಾಡು ಮಾಡಿ ಹಣ ಮಾಡದೇ ಬೇರೆ ದಾರಿ ಇಲ್ಲ. ಈ ಸತ್ಯ ತೃತೀಯ ರಾಷ್ಟ್ರಗಳಿಗೆ ಅರ್ಥವಾಗಬೇಕಷ್ಟೇ.
Subscribe to:
Post Comments (Atom)
No comments:
Post a Comment