Saturday, January 24, 2009

ಸಿನಿಮಾ ಮಾಧ್ಯಮ: ಯಾಕೆ ಹೀಗಾಗಿದೆ?

ಸಿನಿಮಾ ನಮಗೆ ಬರಿಯ ಮನರಂಜನೆ. ಮನದ ಮಾತುಗಳ ಹೇಳುವ ಮಾಧ್ಯಮವಾಗಿ ಅದನ್ನು ನಾವು ಬಳಸಿಕೊಳ್ಳಲೇ ಇಲ್ಲ. ಎಂಟರ್ ಟೇನ್ಮೆಂಟ್ ಪ್ಯಾಕೇಜ್ ಅನ್ನಾಗಿ ಅದನ್ನು ನೋಡುವ ಚಾಳಿ ಈಗ ಜಾಸ್ತಿಯಾಗುತ್ತಿದೆ. ದಾದಾಸಾಹೇಬ್ ಫಾಲ್ಕೆ ಕಾಲದಲ್ಲಿ ಈ ಮಾಧ್ಯಮದ ಬಗ್ಗೆ ಜನರಿಗಿದ್ದ ನಿರೀಕ್ಷೆಗಳೇ ಬೇರೆ ಇತ್ತು. ಅದನ್ನು ಕೇವಲ ಆಧುನಿಕ ಆವಿಷ್ಕಾರವಾಗಷ್ಟೇ ಕುತೂಹಲದಿಂದ ಕಂಡಿರಬಹುದು.
ನಂತರದಲ್ಲಿ ಸಿನಿಮಾ ನಮ್ಮ ರಂಗಭೂಮಿಯ ಮತ್ತೊಂದು ಅವತಾರದಂತೆಯೇ ಬಳಕೆಯಾಯ್ತು. ನಾಟಕದ ದೃಶ್ಯಗಳು, ಡೈಲಾಗ್ ಮತ್ತು ಹಾಡುಗಳನ್ನು ರಂಗಮಂಚದ ಮೇಲೆ ನೋಡುವುದಕ್ಕಿಂತ ಪರದೆಯ ಮೇಲೆ ನೋಡುವುದು ಹೆಚ್ಚು ಖುಷಿ ಕೊಡತೊಡಗಿತು. ಆಗ (ಈಗಲೂ) ರಂಗಭೂಮಿಯಲ್ಲಿ ತೊಡಗಿಕೊಂಡವರೇ ಸಿನಿಮಾದಲ್ಲೂ ತೊಡಗಿಕೊಳ್ಳುತ್ತಿದ್ದರು. ಹೀಗಾಗಿ ಪರದೆಯ ಮೇಲೆಲ್ಲ ರಂಗನೋಟ ಇರುತ್ತಿತ್ತು.
ಸಿನಿಮಾಗೆಂದೇ ಕಲಾವಿದರು, ತಂತ್ರಜ್ಞರ ದಂಡೇ ತರಬೇತುಗೊಳ್ಳುತ್ತದೆ. ಅದಕ್ಕಾಗೇ ಸ್ಕೂಲು ಮತ್ತಿತರ ತರಬೇತಿ ಸಂಸ್ಥೆಗಳಿವೆ. ಆದರೆ ಇದೆಲ್ಲದರಿಂದ ಒಟ್ಟು ಔಟ್ ಕಂ ಏನು? ನಮ್ಮ ಇತ್ತೀಚೆಗಿನ ಸಿನಿಮಾಗಳನ್ನು ನೋಡಿದರೆ ಅದೆಲ್ಲ ಅರಿವೆ ಬರುವಂಥಾದ್ದೇ.
ಸಿನಿಮಾ ಪಕ್ಕಾ ನಿರ್ದೇಶಕನ ಮಾಧ್ಯಮ. ರಂಗಭೂಮಿ ನಟನ ಮಾಧ್ಯಮ. ಅದೆಲ್ಲ ಉಲ್ಟಾ-ಪಲ್ಟಾ. ಹಾಗಾಗಬಾರದು ಎಂದು ಹೇಳುವುದಾದರೂ ಹೇಗೆ? ಆದರೆ, ಸಿನಿಮಾರಂಗ ನಟನ ಅದಕ್ಕೂ ಹೆಚ್ಚಾಗಿ ಸ್ಟಾರ್ ಗಳ ಮಾಧ್ಯಮವಾಗಿ ನಿಂತಿದ್ದು ದೊಡ್ಡ ಅದ್ವಾನವಾಗಿದೆ. ಅದರ ಕೆಟ್ಟ ಪರಿಣಾಮ ಮತ್ತು ಸಂಸ್ಕೃತಿಯನ್ನು ನಾವೀಗ ಕಾಣುತ್ತಿದ್ದೇವೆ.
ದಕ್ಷಿಣದಲ್ಲಿ ಕನ್ನಡದ ಡಾ. ರಾಜ್ ಕುಮಾರ್, ತಮಿಳಿನ ಎಂಜಿಆರ್, ತೆಲುಗಿನ ಎನ್ ಟಿ ಆರ್, ಹಿಂದಿಯಲ್ಲಿ ರಾಜ್ ಕಪೂರ್, ಮಲೆಯಾಳಿಯಲ್ಲಿ ಪ್ರೇಮ ನಜೀರ್... ಇಂಥವರೆಲ್ಲ ರಂಗಭೂಮಿಯ ನಂಟಿನಿಂದ ಬಂದ ಸಿನಿಮಾ ತಾರೆಯರು. ಇವರೆಲ್ಲ ಆಯಾ ಪ್ರದೇಶದ ಸಾಂಸ್ಕೃತಿಕ ಪ್ರತಿನಿಧಿಗಳಾಗಿರೂಪುಗೊಂಡಿದ್ದು ಸಿನಿಮಾ ಮಾಧ್ಯಮದ ಮೂಲಕ. ಹಾಗೆ ಒಟ್ಟು ಭಾರತೀಯ ಚಲನಚಿತ್ರ ಜಗತ್ತಿನ ದೊಡ್ಡ ಐಕನ್ ಆಗಿದ್ದು. ಇಂಥ ಕೆಲವರನ್ನು ಹೊರತುಪಡಿಸಿದರೆ ಸಿನಿಮಾ ನಟರಾಗಿ ನಮಗೆಲ್ಲ ಕಾಣಿಸುವವರು ಎಂಥವರು? ಒಂದು ಪ್ರಬಲ ಮಾಧ್ಯಮ ಬಳಸಿಕೊಂಡು, ಅದರ ಶಕ್ತಿಯಿಂದಲೇ ದೊಡ್ಡ ಸ್ಟಾರ್ ಆದವರು. ಇವರೆಲ್ಲ ಸಿನಿಮಾ ಮಾಧ್ಯಮವನ್ನು ಒಂದು ವ್ಯವಸ್ಥಿತ ಮಾರುಕಟ್ಟೆ ಸರಕಾಗಿಸಿದವರೇ.
ಇಂಥ ಮಾರುಕಟ್ಟೆ ಸ್ಟಾರ್ ಗಳಿಂದ ಇಡೀ ಮಾಧ್ಯಮ ವ್ಯಾಪಾರಿ ಸರಕಾಗಿ ಹೋಗಿದೆ. ಈ ಸ್ಟಾರ್ ಗಳಿಗೆ ಸೂಟ್ ಆಗುವಂಥ ಪಾತ್ರಗಳನ್ನು, ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಅದನ್ನೇ ಬಿಕರಿ ಐಟಂ ಆಗಿಸಲಾಗುತ್ತಿದೆ. ಸಿನಿಮಾ ಎಂಟರ್ ಟೇನ್ಮೆಂಟ್ ಪ್ಯಾಕೇಜ್ ಆಗಿ ಹೋಗಿದೆ. ಅದರಿಂದ ಆಗಬೇಕಿದ್ದ ಪರಿಣಾಮ, ಆರೋಗ್ಯಕರ ಮನರಂಜನೆ ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಪಶ್ಚಿಮವನ್ನು ನಾವು ದೂರುತ್ತಲೇ ಬಂದಿದ್ದೇವೆ. ಎಷ್ಟೊ ಸಾರಿ ಅದು ಸೂಕ್ತವೂ ಕೂಡ.
ಇಂಗ್ಲಿಷ್ ಚಿತ್ರ ಎಂದಾಗ ನಮ್ಮ ಬಹುತೇಕರಲ್ಲಿ ಅವು ಅಶ್ಲೀಲ ಚಿತ್ರಗಳೆಂದೇ ಅಭಿಪ್ರಾಯ ಇದ್ದ ಕಾಲವೊಂದಿತ್ತು. ಬೆಂಗಳೂರಿನ ಕೆಂಪೇಗೌಡ, ಸ್ಟೇಟ್ ಮತ್ತಿತರ ಕೆಲ ಚಿತ್ರಮಂದಿರಗಳಲ್ಲಿ ಹಾಗೂ ಹುಬ್ಬಳ್ಳಿಯ ಗಣೇಶ್, ಧಾರವಾಡದ ಮಾಡರ್ನ್ ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ನೋಡುವವನ ಟೇಸ್ಟಿನ ಬಗ್ಗೆ ಆಡಿಕೊಳ್ಳುತ್ತಿದ್ದ ಕಾಲವೂ ಇತ್ತು. ಅವೇ ಚಿತ್ರಮಂದಿರಗಳಲ್ಲಿ ಇಂಗ್ಲಿಷ್ ಕ್ಲಾಸಿಕ್ ಚಿತ್ರಗಳನ್ನೂ ನೋಡಿದವರೂ ಇದ್ದಾರೆ.
ಬದಲಾದ ಕಾಲದಲ್ಲಿ ಅಂಥ ಅಶ್ಲೀಲ ಚಿತ್ರಗಳೆಲ್ಲ ನಮ್ಮ ಬೆಡ್ ರೂಮ್ ಮತ್ತು ಸಿಸ್ಟಂನ ಹಿಡನ್ ಫೋಲ್ಡರ್ ನಲ್ಲಿ ತುಂಬಿ ಹೋಗಿವೆ. ಇದೆಲ್ಲ ಬೆಳವಣಿಗೆಯಿಂದ ಸಿನಿಮಾ ಮಾಧ್ಯಮ ಬೇರೆಯದೇ ಆಯಾಮದಲ್ಲಿ ಅಂಥ ವಸ್ತುವನ್ನು ಹಾಡಿನ ರೂಪದಲ್ಲಿ ಅಥವಾ ಬೆಡ್ ರೂಂ ಸೀನ್ ರೂಪದಲ್ಲಿ ಬಳಸಿಕೊಳ್ಳುತ್ತಿದೆ. ಇದೂ ಕೂಡ ಆಯಾಯ ವರ್ಗದ ಟೇಸ್ಟ್ ಅನ್ನು ಪ್ರತಿನಿಧಿಸುತ್ತದೆ.
ವಿಡಿಯೊ ಡಿವಿಡಿ, ಪೋರ್ನೋ ಎಷ್ಟೆಲ್ಲ ಅವಿಷ್ಕಾರಗಳ ಹಾವಳಿಯ ನಡುವೆಯೂ ಸಿನಿಮಾ ಅಂಥ ವಸ್ತುವಿನ ಸುತ್ತ ಗಿರಕಿ ಹೊಡೆಯುವುದು ಯಾಕೆ? ಈ ವಿಷಯದಲ್ಲಿ ಇಂಗ್ಲಿಷ್ ಚಿತ್ರಗಳನ್ನು ಮೆಚ್ಚಬೇಕು. ಅವೀಗ ಇಂಥದ್ದನ್ನೆಲ್ಲ ಅಷ್ಟು ಪ್ರಮುಖವಾಗಿ ಕಾಣುವುದೇ ಇಲ್ಲ. ಮಾಧ್ಯಮದ ಸಾಧ್ಯತೆಗಳನ್ನು ಹೆಚ್ಚಿಸುವ ಅದರ ಯತ್ನಗಳನ್ನು ನಾವು ಆಗಾಗ ಕಾಣುತ್ತಲೇ ಇದ್ದೇವೆ.
ಉದಾಹರಣೆಗೆ ಅಪೊಕ್ಯಾಲಿಪ್ಟೊ (ಮೆಲ್ ಗಿಬ್ಸನ್ ನಿರ್ದೇಶನ), ಚೆಗ್ವೆರಾ ಮತ್ತಿತರ ಇತ್ತೀಚಿನ ಕೆಲ ಸಿನಿಮಾಗಳು ಯಾವ ವಿಷಯಗಳನ್ನು ಹೇಗೆ ಎತ್ತಿಕೊಳ್ಳುತ್ತಿವೆ ಮತ್ತು ಅದನ್ನು ಕಲಾತ್ಮಕವಾಗಿ ಹೇಗೆ ನಿರೂಪಿಸುತ್ತಿವೆ ಎನ್ನುವುದನ್ನು ಕಾಣಬಹುದು. ನಮ್ಮಲ್ಲಿ ಹಾಗೆ ಯೂನಿವರ್ಸಲ್ ಥಿಂಕಿಂಗ್ ಇಲ್ಲ. ಕೇವಲ ಫ್ಯಾಮಿಲಿ ಮೆಲೊಡ್ರಾಮಾ ಮತ್ತು ಹಿಂಸೆ, ಸೆಕ್ಸ್ ಪ್ರಚೋದಿತ ಯತ್ನಗಳು. ನಮ್ಮೊಳಗಣ ಜಗತ್ತಿಗೂ ಮತ್ತು ಅಂಥ ಸಂಗತಿಗಳಿಗೂ ಅಂಥ ನೇರವಾದ ಸಂವಾದವೇ ನಡೆಯುವುದಿಲ್ಲ. ಅವು ನಮ್ಮ ಮನಸ್ಸನ್ನು ಅರಳಿಸುತ್ತಲೇ ಇಲ್ಲ. ಆದರೂ ರೀಲು ಸುತ್ತುವುದು ನಿಲ್ಲುತ್ತಿಲ್ಲ.

ಹಿಂದಿ, ಉರ್ದು ಗಜಲುಗಳಿಂದ ಯಥಾವತ್ ಸಾಲುಗಳನ್ನು ಕದಿಯೋದು ಮತ್ತು ಅದಕ್ಕೆ ರಾಗ ಸಂಯೋಜನೆ ಕೂಡ ಅನ್ಯ ಭಾಷೆ ಮತ್ತು ವಿದೇಶದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಮತ್ತು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವ ಸಂಯೋಜನೆಗಳನ್ನೇ ಬಳಸುವುದು ನಡೆದೇ ಇದೆ.

ಇದಷ್ಟರಿಂದಲೇ ಒಂದು ಪ್ರದೇಶದ ಸಿನಿಮಾ ಜಗತ್ತನ್ನು ಅಳೆಯುವುದು ಸಾಧ್ಯವಲ್ಲವಾದರೂ ನಮ್ಮ ಮೇನ್ ಸ್ಟ್ರೀಂ ಸಿನಿಮಾಗಳಲ್ಲಿ ಇದಕ್ಕೂ ಹೆಚ್ಚಿನದನ್ನು ಕಾಣುವುದು ಅಪರೂಪವೇ ಆಗಿದೆ. ಲಗಾನ್ ಚಿತ್ರ ಬಂದಾಗ ದೇಶದಲ್ಲಿ ಅದಕ್ಕೆ ಸಿಕ್ಕ ಮನ್ನಣೆ ಅದ್ಭುತವಾಗಿತ್ತು. ಈತನಕ ಬಂದ ಸಿನಿಮಾಗಳಿಗಿಂತ ಭಿನ್ನವಾದ ನೆಲೆಯಲ್ಲಿ ಅದನ್ನು ನೋಡಲು ಸಾಧ್ಯವಾಗಿತ್ತು. ಚಕ್ ದೇ ಇಂಡಿಯಾ, ಅಶೋಕ, ಜೋಧಾ ಅಕ್ಬರ್, ಸ್ವದೇಶ್, ಪಹೇಲಿ ಮತ್ತಿತರ ಚಿತ್ರಗಳು ನಮ್ಮತನದ ಸಾಧ್ಯತೆಯನ್ನು ಹೇಳಿದ ಚಿತ್ರಗಳೇ. ಆದರೆ, ಅದು ಬಹುಕಾಲ ಮುಂದುವರಿಯಲಿಲ್ಲ. ಮತ್ತೆ ಮಸಾಲಾ ಬೇಯಿಸುವ ಚಾಳಿ ಬಿಡಲೇ ಇಲ್ಲ. ಅದರ ಪರಿಣಾಮವಾಗಿ ಅಪಭ್ರಂಶ ಕಾಮಿಡಿಗಳು, ಸೆಕ್ಸ್ ಥ್ರಿಲರ್ ಸಿನಿಮಾಗಳದೇ ಕಾರುಬಾರು ಮುಂದುವರಿಯಿತು.
ಇಂಥ ಸಂದರ್ಭದಲ್ಲೇ ಬಂದ 'ಸ್ಲಂಡಾಗ್ ಮಿಲಯನೇರ್' ಚಿತ್ರ ಭಾರತಕ್ಕೊಂದು ಸಿನಿ ಪಾಠದಂತೆ. ಭಾರತೀಯ ಸಿನಿಮಾದ ಫಾರ್ಮೆಟ್ ಇಟ್ಟುಕೊಂಡೇ ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೊಯ್ಲೆ ಒಂದು ಪಕ್ಕಾ ಭಾರತೀಯ ಸಿನಿಮಾ ಮಾಡಿ ತೋರಿಸಿದರು.
ಅದಕ್ಕೀಗ ಆಸ್ಕರ್ ಸುರಿಮಳೆಯಾಗಿದೆ. ಇನ್ನು ಭಾರತೀಯ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ಹೊಸ ಆಯಾಮವೇ ದಕ್ಕಲಿದೆ. ಇಡೀ ಜಗತ್ತು ಬಾಲಿವುಡ್ ಸಿನಿಮಾಗಳ ಬಗ್ಗೆ ಆಸಕ್ತಿ ಹೊಂದುತ್ತಿದೆ. ಇದನ್ನು ಬಾಲಿವುಡ್ ಹೇಗೆ ಬಳಸಿಕೊಳ್ಳುತ್ತದೊ! ಎನ್ನುವ ಕುತೂಹಲ ನನಗೂ ಇದೆ.

Monday, January 19, 2009

ಒಬಾಮಾ: ಅಮೆರಿಕಕ್ಕೆ ಅನಿವಾರ್ಯದ ಫೇಸ್?


ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ! ಬಿಳಿಯರು ಕಟ್ಟಿದ ವೈಟ್ ಹೌಸ್ ಎನ್ನುವ ಅಧಿಕಾರ ಶಕ್ತಿ ಕೇಂದ್ರದಲ್ಲಿ ಕರಿಯನೊಬ್ಬನ ಪ್ರವೇಶ. ಈ ರಂಗಪ್ರವೇಶಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ.
ಮೇಲು ನೋಟಕ್ಕೆ ಇದೊಂದು ಭಾರಿ ಬದಲಾವಣೆ, ಹೊಸ ಶಕೆ ಎಂದೆನಿಸುತ್ತದೆ. ವಾಸ್ತವದಲ್ಲಿ ಹಾಗಿದೆಯಾ? ಸದ್ಯ ಇಂಥದೊಂದು ಗುಮಾನಿ ತುಂಬ ಆತುರತೆ ಅನ್ನಿಸಿಕೊಳ್ಳುತ್ತದೆ ಅಲ್ಲವೇ? ಆದರೆ, ಅಮೆರಿಕದ ಇತಿಹಾಸ ಮತ್ತು ಬುದ್ಧಿ ಬಲ್ಲವರಿಗೆ ಇದೊಂದು ತಂತ್ರವಾಗೇ ಕಾಣಿಸುತ್ತದೆ.
ಅಮೆರಿಕ ತನಗೆ ಕಷ್ಟ ಬಂದಾಗೆಲ್ಲ ಇಂಥ ಮುಖವಾಡದಲ್ಲಿ ಬಚ್ಚಿಟ್ಟುಕೊಂಡಿದ್ದೇ ಹೆಚ್ಚು. ಅದರ ಆರ್ಥಿಕ ಮದ ಇಳಿಯುತ್ತಿರುವ ಹೊತ್ತಲ್ಲಿ ಮಾನ ಉಳಿಸಿಕೊಳ್ಳುವುದಕ್ಕೆ ಒಂದು ಮುಖ ಬೇಕಿತ್ತು. ಆ ಮುಖವೇ ಮುಗ್ಧ ಜನರ ಪ್ರತೀಕದಂತೆ ಕಾಣುವ ಬರಾಕ್ ಒಬಾಮಾ.
ಬಹಳ ವರ್ಷಗಳ ಹಿಂದೆಯೇ ತಾನು ಅಮೆರಿಕ ಅಧ್ಯಕ್ಷ ಪಟ್ಟದ ವಾರಸುದಾರ ಎಂದು ಒಬಾಮಾ ಹೇಳಿದ್ದೇನೋ ನಿಜ. ಅದನ್ನೇ ಈಗ ಅಮೇರಿಕನ್ನರು ನಿಜವಾಗಿಸಿದ್ದಾರೆ. ಅದು ಕರಿಯರ ಮೇಲಿನ ಒಲವು ಅಥವಾ ಪ್ರೀತಿಯ ಸಂಕೇತ ಎಂದೇನೂ ಭಾವಿಸಬೇಕಿಲ್ಲ. ಶತಮಾನಗಳಿಂದ ಶೋಷಣೆಗೆ ಒಳಗಾಗುತ್ತಲೇ ಬಂದ ಕಪ್ಪು ಜನಾಂಗವನ್ನು ಅಮೆರಿಕನ್ನರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಮಾನ ಕಾಪಾಡುವುದಕ್ಕೆ ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ಅದು ಒಲಿಂಪಿಕ್ ಅಥವಾ ಬ್ಯಾಸ್ಕೆಟ್ ಬಾಲ್ ಆಟವಾಗಿರಬಹುದು. ಅಥವಾ ಅದರ ಮಿಲಿಟರಿ ಪಡೆ ಆಗಿರಬಹುದು. ಅಲ್ಲೆಲ್ಲ ಬೆವರಿಳಿಸಿ, ರಕ್ತ ಸುರಿಸಿ ದೇಶಕ್ಕೆ ಹೆಮ್ಮೆ ತರುವ ಇಲ್ಲವೇ ಕುಸಿದು ಹೋಗುತ್ತಿರುವ ಮೌಲ್ಯ, ಮಾನದ ಮಾತು ಬಂದಾಗೆಲ್ಲ ಅಮೆರಿಕಕ್ಕೆ ನೆನಪಾಗುವುದೇ ಈ ಕರಿಯರು.
ಅಮೆರಿಕ ತನ್ನ ಆರ್ಥಿಕ ಸಂಕಷ್ಟವನ್ನು ವಿಶ್ವದ ಜನಮಾನಸದಿಂದ ದೂರವಿಡಲು ಒಬಾಮಾ ಮುಖ ಬಳಸಿಕೊಳ್ಳುತ್ತಿದೆ. ಅಲ್ಲಿನ ಎಲ್ಲ ಬ್ಯಾಂಕ್ ಗಳು ದಿವಾಳಿ ಎದ್ದಿವೆ. ಸಾಫ್ಟ್ ವೇರ್ ಕಂಪೆನಿಗಳು ಅಡ್ಡಡ್ಡ ಮಲಗಿವೆ. ಹೀಗಾಗಿ ಅಮೆರಿಕದ ಸಾಫ್ಟ್ ವಂಚನೆ ಇನ್ನು ಕೊಂಚ ಕಷ್ಟಕರ. ಏನೇ ಕ್ರಮ ಕೈಗೊಳ್ಳ ಹೊರಟರೂ ಕೈಸುಟ್ಟು ಹೋಗುವುದು ಗ್ಯಾರಂಟಿ ಎಂದು ಅಲ್ಲಿನ ಉದ್ಯಮ ಪ್ರಭುಗಳಿಗೂ ಗೊತ್ತಿರುವ ವಿಚಾರ. ಹೀಗಾಗಿ ಅಮೆರಿಕ ಅಧ್ಯಕ್ಷ ಪೀಠವೀಗ ಮುಳ್ಳಿನ ಹಾಸಿಗೆ!
ಇಲ್ಲಿಯತನಕ ದೇಶದ ಉಸಾಬರಿ ಮಾಡಿ ಸುಸ್ತಾಗಿರುವ ಬಿಳಿಯರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ದೇಶ ಆರ್ಥಿಕವಾಗಿ ಒಂದಷ್ಟು ಚೇತರಿಸಿಕೊಳ್ಳುವತನಕ ಕೊಂಚ ವಿರಮಿಸಿ ಎಂದು ಅವರ ಒಳದನಿ ಅಥವಾ ಅಂತರಾತ್ಮ ಕೂಗಿ ಹೇಳಿದಂತಿದೆ. ಅದಕ್ಕೇ ಇಂಥದೊಂದು ವ್ಯವಸ್ಥೆ. ತೃತೀಯ ಜಗತ್ತು ಮತ್ತು ಅನ್ಯರಾಷ್ಟ್ರಗಳು ಇಂಥದೊಂದು ಬದಲಾವಣೆಯ ಭ್ರಮೆಯಲ್ಲಿ ಮುಳುಗಿ ಹೋಗಲಿ ಎನ್ನುವುದು ಇದರ ಹಿಂದಿನ ಷಡ್ಯಂತ್ರ.
ಅಮೆರಿಕದ ಯುದ್ಧ ಪಿಪಾಸು ಕೃತ್ಯವನ್ನು ಇಡೀ ಜಗತ್ತು ಮರೆಯಲು ಹೇಗೆ ಸಾಧ್ಯವಿತ್ತು? ಅದರ ಆಫ್ಘಾನಿಸ್ಥಾನ, ಇರಾಕ್ ಮೇಲಿನ ದೌರ್ಜನ್ಯ ಹೇಗೆ ಮರೆಯುವುದು? ಅದು ವಿಯೆಟ್ನಾಂ, ಜಪಾನ್ ಮತ್ತಿತರ ಪುಟ್ಟ ರಾಷ್ಟ್ರಗಳ ಮೇಲೆ ಮಾಡಿದ ದ್ರೋಹ ಮರೆಯುವುದು ಹೇಗೆ ಸಾಧ್ಯವಿತ್ತು? ತನ್ನ ಶಸ್ತ್ರಾಸ್ತ್ರ ಮಾರಾಟ ಒಂದರಿಂದಲೇ ಬಹುತೇಕ ಬೊಕ್ಕಸ ತುಂಬಿಕೊಳ್ಳುವ ರಾಷ್ಟ್ರ, ಸಾಫ್ಟ್ ವೇರ್ ಎನ್ನುವ ಹಣ ಮಾಡುವ ಧಂಧೆಯನ್ನೇ ನಂಬಿಕೊಂಡ ರಾಷ್ಟ್ರ ಮುಂದಿನ ದಿನಗಳು ಕಷ್ಟದಲ್ಲಿ ಮುಳುಗಲಿವೆ ಎಂದು ಅರಿತುಕೊಂಡಿತ್ತು. ಆಫ್ಘಾನ್ ಮತ್ತು ಇರಾಕ್ ನಲ್ಲಿ ಹರಿಸಿದ ನೆತ್ತರಿನ ಜತೆ ಅದರ ಡಾಲರ್ ಥೈಲಿ ಕೂಡ ಕರಗಿ ಹೋಗಿತ್ತು. ಇದೆಲ್ಲದರಿಂದ ಸುಲಭವಾಗಿ ಬಚಾವಾಗುವುದು ಅದಕ್ಕೆ ಹೇಗೆ ಸಾಧ್ಯವಿತ್ತು?
ಇಡೀ ಮನುಷ್ಯಕುಲದ ಮೇಲೆ ಯುದ್ಧದಂಥ ಅನಾಗರಿಕ ಒತ್ತಡಗಳನ್ನು ಹೇರುತ್ತಲೇ ಬಂದ ಅದರ ಹೇಯ ಕೃತ್ಯಗಳನ್ನು ಮರೆಯುವುದು ಹೇಗೆ ಸಾಧ್ಯವಿತ್ತು? ತೈಲ ಮಾರುಕಟ್ಟೆಯ ಮೇಲೆ ಪ್ರಭುತ್ವ ಸಾಧಿಸಹೊರಟ ಬುಷ್ ಕುಟುಂಬ ಎಷ್ಟೆಲ್ಲ ರಾದ್ದಾಂತಗಳನ್ನು ಮಾಡಿಕೊಂಡಿತು? ಇದೆಲ್ಲವನ್ನು ವಿಶ್ವ ಸಮುದಾಯ ಮರೆಯಬೇಕಲ್ಲವೇ? ಹಾಗೆ ಮರೆಸುವುದಕ್ಕೇ ಈ ಒಬಾಮಾ ಫೇಸ್ ಬೇಕು!
ವಿಶ್ವದ ಬೃಹತ್ ತೈಲ ವ್ಯಾಪಾರ ಘಟಕಗಳಲ್ಲಿ ಬುಷ್ ಒಡೆತನದ ತೈಲ ಕಂಪೆನಿಯೂ ಒಂದು. ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಒಮ್ಮೆಲೆ ಎದ್ದು ನಿಂತಿದ್ದ ಮಾರುಕಟ್ಟೆ ಸಂಘರ್ಷದ ಲಾಭ ಪಡೆಯಲು ಅಮೆರಿಕ ಹೂಡಿದ ತಂತ್ರಗಳೇ ಕುವೈತ್ ಆಕ್ರಮಣ ಮತ್ತದರ ಅಮೆರಿಕ ವಶೀಕರಣ, ಇರಾಕ್ ಮೇಲಿನ ಯುದ್ಧ. ಅಮೆರಿಕ 9/11 ಕೃತ್ಯದ ಹಿಂದೆಯೂ ತೈಲ ಕಂಪೆನಿಗಳ ಕೈವಾಡವಿದೆ. ಅದು ಹೊಸದೊಂದು ಮಾರುಕಟ್ಟೆ ವ್ಯವಸ್ಥೆ ಮತ್ತು ಆರ್ಥಿಕ ಬದಲಾವಣೆಯ ಗುರಿ ಹೊಂದಿದ್ದ ಕೃತ್ಯವಾಗಿತ್ತು. ಸುಮ್ಮನೇ ಒಂದಷ್ಟು ಸಾವಿರ ಜನರನ್ನು ಸಾಯಿಸುವ ಮತ್ತು ಬೃಹತ್ ಕಟ್ಟಡ ಧ್ವಂಸ ಮಾಡುವ ಕೃತ್ಯ ಅದಾಗಿರಲಿಲ್ಲ. ಉದ್ದೇಶಗಳೇ ಇಲ್ಲದೆ ಅಂಥ ಕೃತ್ಯಗಳು ನಡೆಯಲು ಹೇಗೆ ಸಾಧ್ಯ?
ಇದೆಲ್ಲದರ ಒಳ ಅರ್ಥಗಳು ಯಾರಿಗೆ ಅರ್ಥವಾಗೋದಿಲ್ಲ? ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಅಮೆರಿಕ ನಡುವಣ ತೈಲ ಕದನ ವಿಶ್ವದ ಸಮಸ್ಯೆಯಾಗಿದ್ದು ಹೇಗೆ? ಭಯೋತ್ಪಾದನೆ ಎನ್ನುವ ಕೋಡ್ ವರ್ಡ್ ಯಾರ ನೆರವಿಗೆ ಬರುತ್ತಿದೆ? ಈಗ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ? ಯಾಕಾಗಿ ಮಾಡುತ್ತಿದೆ?
ಕೇವಲ ತನ್ನ ಸೆಕ್ಯುರಿಟಿ ಟೆಕ್ನಾಲಜಿಯನ್ನು ವಿಶ್ವ ಮಾರುಕಟ್ಟೆಯ ಸರಕಾಗಿಸಲು ಅಮೆರಿಕದಂಥ ರಾಷ್ಟ್ರ ಎಲ್ಲೆಡೆ ಅಸುರಕ್ಷತೆಯ ವಾತಾವರಣ ಸೃಷ್ಟಿಸಲು ಹೆಣಗುತ್ತಿದೆ. ಅದಕ್ಕೆ ಭಯೋತ್ಪಾದಕ ಚಟುವಟಿಕೆಗಳೂ ಸಾಥ್ ನೀಡುತ್ತಿವೆ. ಭಯೋತ್ಪಾದಕ ಸಂಘಟನೆಗಳು ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೊ ಇಂಥದೊಂದು ಮಾರುಕಟ್ಟೆ ಹಿತಾಸಕ್ತಿಗೆ ಪರೋಕ್ಷವಾಗಿ ನೆರವಾಗುತ್ತಿವೆ. ಇದೊಂದು ವಿಪರ್ಯಾಸ.
ಬರಾಕ್ ಒಬಾಮಾ ಇಷ್ಟು ದೊಡ್ಡ ಸಂಕೀರ್ಣ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ಇಡೀ ವಿಶ್ವದಲ್ಲಿ ಸಮಾನತೆಯ ಧ್ವನಿ ಏಳುತ್ತಿದೆ. ಅದನ್ನು ಒಬಾಮಾ ಮನ್ನಿಸುವರೇ? ಅಥವಾ ಬಿಳಿಯರು ಬಯಸುವಂತೆ ನಡೆದುಕೊಳ್ಳುವರೇ? ಅವರಿಗೆ ಅಧ್ಯಕ್ಷಗಿರಿಗಿಂತ ರಾಜಕೀಯ ಸಿದ್ಧಾಂತ ಮುಖ್ಯವಾಗುವುದೆ? ಹಾಗೆ ಮುಖ್ಯವಾಗಿಸಿಕೊಳ್ಳಲು ಅಲ್ಲಿನ ಬಿಳಿಯರ ಲಾಬಿ ಅಷ್ಟು ಸುಲಭವಾಗಿ ಬಿಡುತ್ತದೆಯೇ?...
ಇವೆಲ್ಲ ಈ ಕ್ಷಣದ ಗುಮಾನಿಗಳು. ಇದೆಲ್ಲಕ್ಕಿಂತ ಭಿನ್ನವಾಗಿ ಒಬಾಮಾ ನಿಂತರೆ ಅದೊಂದು ಈ ಶತಮಾನದ ಭಾಗ್ಯ. ಇಂದು ಅಮೆರಿಕ ಇತಿಹಾಸದಲ್ಲಿ ಒಂದು ಬಿಳಿ ಅಧ್ಯಾಯ ಮುಗಿದು 'ಕಪ್ಪು' ಅಧ್ಯಾಯ ಆರಂಭಗೊಳ್ಳುತ್ತಿದೆ. ನೆನಪಿರಲಿ ಬ್ಲ್ಯಾಕ್ ಈಸ್ ನಾಟ್ ಏ ಕಲರ್ ! ಹೀಗಾಗಿ ವರ್ಣ ಭೇದದ ಸಮಸ್ಯೆ ಇನ್ನು ಅಮೆರಿಕದ 'ಅಫೀಸಿಯಲ್' ಸಮಸ್ಯೆ ಆಗದು. ಹಾಗಂತ ನಂಬೋಣ. ಯಾವುದಕ್ಕೂ ಆಲ್ ದಿ ಬೆಸ್ಟ್ ಒಬಾಮಾ...

Sunday, January 4, 2009

ಹೂವು

ಕಾರ್ನಾಡ್ ಸಾಹೇಬರ ರಂಗ ತೋಟದಲ್ಲಿ ಹೊಸ ಹೂವು ಅರಳಿದ್ದು ಯಾಕೊ ಅಷ್ಟು ಸುದ್ದಿಯಾಗಲಿಲ್ಲ... ಹೂವು ಅರಳುವ ಸದ್ದು ಕೇಳಸಿಕೊಂಡವರಾದರೂ ಯಾರಿದ್ದಾರೆ? ಹೂವು ಅರಳುವ ಸದ್ದು ಕೇಳಿಸದು ಆದರೆ ಅದರ ಅರಳುವ ಸೊಕ್ಕು ಮಾತ್ರ ಬೆರಗು ಹುಟ್ಟಿಸುತ್ತದೆ. ಭಾರತೀಯ ರಂಗಭೂಮಿಯ ಹೆಸರಾಂತ ನಿರ್ದೇಶಕ ಸಿ. ಬಸವಲಿಂಗಯ್ಯ ಕಾರ್ನಾಡರ ಹೂವಿಗೆ ಹೊಸ ಪರಿಮಳ ಸೇರಿಸುವ ಕೆಲಸ ಮಾಡಿದ್ದಾರೆ.



ಬೆಂಗಳೂರಿನಲ್ಲಿ ಕಳೆದ ಶನಿವಾರ ಮತ್ತು ಭಾನುವಾರ (3 ಮತ್ತು 4 ಜನವರಿ 2009) ಹೂವು ನಾಟಕದ ಪ್ರಯೋಗಗಳು ನಡೆದವು. ಒಂದು ಅದ್ಭುತ ಯತ್ನ. ಇಡೀ ಪ್ರಯೋಗ ಕಳೆಕಟ್ಟಿದ್ದು ಅದರ ವಿನ್ಯಾಸದ ದೃಷ್ಟಿಯಿಂದ. ಸ್ವತಃ ಅದ್ಭುತ ವಿನ್ಯಾಸಕಾರರೂ ಆದ ಬಸವಲಿಂಗಯ್ಯ ತಮ್ಮ ಪ್ರಯೋಗಗಳಿಗೆ ತಾವೇ ವಿನ್ಯಾಸ ರೂಪಿಸಿಕೊಳ್ಳುತ್ತಾರೆ. ಮತ್ತು ಹೆಚ್ಚಾಗಿ ಅದನ್ನು ದುಡಿಸಿಕೊಳ್ಳುತ್ತಾರೆ ಎನ್ನುವ ಆರೋಪವೂ ಇದೆ. ದೃಶ್ಯ ಮಾಧ್ಯಮದಲ್ಲಿ ಇಂಥ ವಿನ್ಯಾಸ ತುಂಬ ಮುಖ್ಯವೂ ಕೂಡ. ಕೃತಿಯ ಆಶಯಗಳಿಗೆ ಯಾವುದೇ ಧಕ್ಕೆ ತರದೇ ಅದರೊಳಗಿನ ಸಬ್ ಟೆಕ್ಸ್ಟ್ ಮೇಲೆ ಹೆಚ್ಚು ಕಣ್ಣಿಡುವ ಬಸವಲಿಂಗಯ್ಯ, ನಾಟಕದ ಒಳದನಿಗೊಂದು ಅದ್ಭುತ ಶಕ್ತಿ ತುಂಬುತ್ತಾರೆ. ಅವರ ವಿನ್ಯಾಸವೂ ಅಂಥದೇ ನಾದ ತುಂಬಿಕೊಂಡಿರುತ್ತದೆ. ಹೀಗಾಗಿ ನಾಟಕ ವಿಭಿನ್ನ ದನಿಯಾಗಿ ನಮ್ಮೊಳಕ್ಕಿಳಿಯತೊಡಗುತ್ತದೆ. ಹೂವು ರಂಗದ ಮೇಲೆ ಅರಳುವಾಗೆಲ್ಲ ಅದರ ಅಸಲಿ ಪರಿಮಳ ಪ್ರೇಕ್ಷಕನ ಹೃನ್ಮನಗಳನ್ನು ತಾಕಿ ಬಿಡುತ್ತದೆ. ಪರಿಮಳವೇನು ಬರಿ ಮೂಗಿಗಷ್ಟೇ ಸಂಬಂಧಿಸಿದ್ದೇನು! ಕಣ್ಣಿಗೂ ಪರಿಮಳ ಹೀರುವ ಶಕ್ತಿ ಇದೆ!! ಬಸವಲಿಂಗ್ಯ ಅರಳಿಸಿದ ಹೂವು ಕಣ್ಣಿಗೆ ಕಾಣುವಂಥದೇ, ಹಾಗೇ ಅದರ ಪರಿಮಳವೂ...



ಇದು ಏಕವ್ಯಕ್ತಿ ರಂಗಪ್ರಯೋಗಕ್ಕೆ ತಯಾರಾದ ನಾಟಕ. ನಾಟಕ ಆಡುವವರ ಕೊರತೆ ಇರೋದರಿಂದ ಆದಷ್ಟು ಕಮ್ಮಿ ಕ್ಯಾರೆಕ್ಟರ್ ಇರೋ ನಾಟಕ ರಚಿಸುವುದು ಈಗ ಅನಿವಾರ್ಯವೇ ಆಗಿರಬಹುದು.. ಕಾರ್ನಾಡರಿಗೂ ಅಂಥದೊಂದು ಅನಿವಾರ್ಯತೆ ಕಾಣಿಸಿಕೊಂಡಿರಲೂಬಹುದು. ಒಡಕಲು ಬಿಂಬದಂಥ ಏಕವ್ಯಕ್ತಿ ಪ್ರದರ್ಶನಕ್ಕೆ ಸೂಕ್ತವಾದ ನಾಟಕವನ್ನು ಅವರೀಗಾಗಲೇ ರಚಿಸಿದ್ದಾರೆ ಕೂಡ.
ಏಕವ್ಯಕ್ತಿ ಪ್ರದರ್ಶನಗಳು ಕನ್ನಡದಲ್ಲೂ ಇತ್ತೀಚೆಗೆ ಜಾಸ್ತಿ . ಲಕ್ಷ್ಮಿ ಚಂದ್ರಶೇಖರ್ ಮತ್ತಿತರರು ಅಂಥ ಹಲವಾರು ಯತ್ನಗಳನ್ನು ಮಾಡಿದ್ದಾರೆ. ಅವರವರ ಮಿತಿಗಳಲ್ಲಿ ಅಂಥ ಯತ್ನಗಳು ನಡೆಯುತ್ತಿರುವುದು ಎಂಥ ಬೆಳವಣಿಗೆ?
ಇಡೀ ಮನುಷ್ಯ ಸಂಬಂಧಗಳೇ ಈಗ ವ್ಯಕ್ತಿ ಕೇಂದ್ರಿತಗೊಳ್ಳುತ್ತಿವೆ. ವೈಯಕ್ತಿಕ ಬದುಕು ಈಗ ಮುಂಚಿಗಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದು ಒಂದು ರೀತಿಯ ಮಾರುಕಟ್ಟೆಗಳ ತಂತ್ರವೂ ಆಗಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಪ್ರತಿ ಪ್ರಾಡಕ್ಟ್ ಫ್ಯಾಮಿಲಿ ಪ್ಯಾಕ್ ಆಗುವುದಿಲ್ಲ, ಅದೇನಿದ್ದರೂ ವ್ಯಕ್ತಿಗತ ಆಯ್ಕೆಗೆ ಅವಕಾಶ ನೀಡುವ ಮತ್ತು ಅದನ್ನು ಬೂಸ್ಟ್ ಮಾಡುವಂಥದೇ ಆಗಿರುತ್ತವೆ.
ಮನರಂಜನಾ ಮಾಧ್ಯಮ ಕೂಡ ಇಂಥದೇ ಸರಕು ಸಂಸ್ಕೃತಿಗೆ ಒಗ್ಗಿಕೊಂಡಿದೆ. ವಿಶೇಷವಾಗಿ ಸಿನಿಮಾ, ಟಿವಿ ಸೀರಿಯಲ್, ಅಲ್ಬಂ... ಇವೆಲ್ಲ ಇಂಥದ್ದನ್ನೇ ನಂಬಿ ಬದುಕುತ್ತಿವೆ. ಎಂಟರ್ಟೇನಮೆಂಟ್ ಪ್ಯಾಕೇಜ್ ಸಂಸ್ಕೃತಿ ಈಗ ರಂಗಭೂಮಿಗೂ ಬಂದಿದೆ. ಹಾಗೆ ನೋಡಿದರೆ ನೌಟಂಕಿ ಅಥವಾ ಕಂಪನಿ ನಾಟಕಗಳು ಎಂದೋ ಇಂಥ ಪ್ಯಾಕೇಜ್ ಸಂಸ್ಕೃತಿ ಬಳಸಿಕೊಂಡಿವೆ. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡ ಕಂಪನಿ ನಾಟಕಗಳು ಯಶಸ್ವಿ ಪ್ರದರ್ಶನಗಳಿಗಾಗಿ ಹಲವಾರು ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದವು. ಒಂದು ನಾಟಕದ ವಸ್ತುವಿನ ಜತೆಗೆ ಪ್ರಾಪರ್ಟಿ, ಕಾಸ್ಟ್ಯೂಮ್ ಎಲ್ಲ ಹೊತ್ತೊಯ್ಯುವ ಕೆಲಸ ತರುವ ತಲೆನೋವಿನಿಂದ ಹೊರಬರಲು ಅವು ಮೈಥಾಲಜಿಕಲ್ ಸಬ್ಜೆಕ್ಟ್ ಬಿಟ್ಟು ಬೇರೇನನ್ನೊ ಅಳವಡಿಸಿಕೊಳ್ಳತೊಡಗಿದವು. ಅಷ್ಟೇ ಅಲ್ಲ ಕಂಪನಿ ನಾಟಕಗಳಿಗೂ ಕಲಾವಿದರ ಕೊರತೆ ಕಾಡಿತ್ತು. ವಿಶೇಷವಾಗಿ ಸ್ತ್ರೀ ಪಾತ್ರಗಳಿಗೆ ಜನ ಸಿಗುವುದು ಕಮ್ಮಿಯಾಗತೊಡಗಿದಾಗ ಹಾಗೂ ಹೆಚ್ಚು ಪಾತ್ರಗಳುಳ್ಳ ನಾಟಕಗಳಿಗೆ ಕಲಾವಿದರನ್ನು ಸೇರಿಸುವ ಮತ್ತು ಅವರನ್ನು ಸಾಕುವ ತಲೆನೋವು ಯಾಕೆ? ಎಂದುಕೊಂಡು ಪಾತ್ರಗಳು, ಆರ್ಥಿಕ ವೆಚ್ಚಗಳು ಇತ್ಯಾದಿ ಕಟ್ ಡೌನ್ ಪಾಲಿಸಿಯನ್ನು ಅವೂ ಬಳಸಿಕೊಂಡಿದ್ದಿದೆ. ಉದ್ಯಮಗಳು ದಿವಾಳಿಯಾಗುವ ಅಂಚಿಗೆ ಬಂದಾಗ ಅದರ ಮಾಲೀಕರು ಇಂಥದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲವೇ? ಈಗಲೂ ಸಾಫ್ಟ್ ವೇರ್, ಕಾರ್ಪೋರೇಟ್ ಕಂಪನಿಗಳು ಇದನ್ನೇ ಅನುಸರಿಸುತ್ತಿಲ್ಲವೇನು?
ನಮ್ಮ ರಂಗಭೂಮಿಯೂ ಈಗ ಹಲವಾರು ಕಾಸ್ಟ್ ಕಟ್ ಡೌನ್ ತಂತ್ರಕ್ಕೆ ಮೊರೆ ಹೋಗಿದ್ದು ಸ್ವಾಭಾವಿಕ.
ಹಾಗಂತ ಕಾರ್ನಾಡರ ಹೂವು ನಾಟಕವನ್ನು ಸಮರ್ಥಿಸಿಕೊಳ್ಳುವುದು ಎಂದರ್ಥವಲ್ಲ. ಈವರೆಗಿನ ಏಕವ್ಯಕ್ತಿ ಪ್ರದರ್ಶನಗಳಿಗಿಂತ ಇದು ಭಿನ್ನವಾಗಿದೆ. ನಾಟಕ ಹೆಚ್ಚು ಪೊಯಟಿಕ್ ಆಗಿದೆ. ಕಾರ್ನಾಡರ ನಾಟಕಗಳಲ್ಲಿ ದೃಶ್ಯ ಸಾಧ್ಯತೆಗಳು ಸಾಮಾನ್ಯವಾಗಿ ಹೆಚ್ಚು. ಅವರ ಸಂಭಾಷಣೆಗಳೂ ಕೂಡ ವಿಶಿಷ್ಠವೇ. ಆದರೆ, ಟಿಪ್ಪುವಿನ ಕನಸುಗಳು ಬರುವುದಕ್ಕೂ ಮುಂಚಿನ ಎಲ್ಲ ನಾಟಕಗಳಲ್ಲಿ ಸಂಭಾಷಣೆ ಗಟ್ಟಿಯಾಗಿದ್ದಷ್ಟು ಮತ್ತು ಅರ್ಥಪೂರ್ಣವಾಗಿದ್ದಷ್ಟು ಆನಂತರದ ನಾಟಕಗಳಲ್ಲಿ ಬರಲಿಲ್ಲ. ಒಡಕಲು ಬಿಂಬದಲ್ಲೂ ಆ ಮಾಂತ್ರಿಕ ಮಾತುಗಾರಿಕೆ ಇರಲಿಲ್ಲ. ತುಘಲಕ್ ನಾಟಕದಲ್ಲಿ ಕಾಣುವ ಮೊಣಚು ಮಾತುಗಾರಿಕೆ ಇದರಲ್ಲಿ ಬರಲಿಲ್ಲ. ಹೂವು ಕೂಡ ಇದಕ್ಕೆ ಹೊರತಲ್ಲ. ಕಾರಣ ಏನು? ಇದೊಂದು ಸಾಹಿತ್ಯಿಕ ಚರ್ಚೆಯ ವಿಷಯ.
ಇನ್ನು ಪ್ರಯೋಗಕ್ಕೆ ಬರೋಣ. ಮೊದಲೇ ಹೇಳಿದ ಹಾಗೆ ಇದು ಏಕವ್ಯಕ್ತಿ ಪ್ರದರ್ಶನಕ್ಕೆ ಬರೆದ ನಾಟಕ. ಎಲ್ಲವೂ ಒಂದು ಪಾತ್ರದ ಸ್ವಗತದ ಮೂಲಕವೇ ಹೆಚ್ಚು ಹೇಳುವಂಥದು. ಅವನ ಸ್ವಗತಗಳಲ್ಲೇ ಕೆಲ ಪಾತ್ರಗಳೂ ಬಂದು ಹೋಗುತ್ತವೆ. ಅವೆಲ್ಲವು ರನಿಂಗ್ ಕಾಮೆಂಟ್ರಿ ಥರ ಅನಿಸುತ್ತದೆ. ಆದರೆ, ಈ ಮಿತಿಯನ್ನು ಬಸವಲಿಂಗಯ್ಯ ಮೀರಲು ಯತ್ನಿಸಿದ್ದು ಗಮನಾರ್ಹ. ಈ ಹಿಂದೆ ಇದನ್ನು ರಜತ್ ಕಪೂರ್ ರಂಗಪ್ರಯೋಗ ಮಾಡಿದ್ದರು. ಒಬ್ಬನೇ ಎಲ್ಲವನ್ನು ಹೇಳಲು ಯತ್ನಿಸಿ ಸೋತಿದ್ದರು. ಆ ತಪ್ಪನ್ನು ಬಸವಲಿಂಗಯ್ಯ ಈ ಪ್ರಯೋಗದಲ್ಲಿ ಸರಿಪಡಿಸಲು ನೋಡಿದ್ದಾರೆ. ಇದೊಂದು ಉತ್ತಮ ಪ್ರಯತ್ನವಾಗಿ ಕಾಣಿಸುತ್ತದೆ.
ಕೆಲವು ಸಿಂಬಲ್ ಗಳ ಮೂಲಕ ದೃಶ್ಯರೂಪ ಕಟ್ಟಲು ಯತ್ನಿಸಿದ್ದಾರೆ. ವಿಶೇಷವಾಗಿ ಕೆಲ ಧಾರ್ಮಿಕ ಸಿಂಬಲ್ ಗಳನ್ನು ಬಳಸಿಕೊಂಡಿದ್ದಾರೆ. ನಾಟಕದ ಮೂಲ ವಿಷಯವೇ ಸೆಕ್ಸ್. ಹೀಗಾಗಿ ಸಾಂಕೇತಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಸೆಕ್ಸ್ ಸಿಂಬಲ್ ಗಳನ್ನು ಕಲಾತ್ಮಕವಾಗಿ ದುಡಿಸಿಕೊಂಡಿದ್ದು ಮೆಚ್ಚುಗೆಯಾಯ್ತು.
ನಿತ್ಯ ಲಿಂಗಕ್ಕೆ ಹೂವುಗಳಿಂದ ಸಿಂಗರಿಸುತ್ತ ರಸಿಕ ಲೋಕಕ್ಕೆ ಜಾರುವ ದೇವಸ್ಥಾನದ ಪೂಜಾರಿಯೊಬ್ಬನನ್ನು ಕೇಂದ್ರವಾಗಿಟ್ಟುಕೊಂಡು ಬದುಕಿನ ಒಂದು ಸತ್ಯ ಹೇಳ ಹೊರಟಿದ್ದು ಕುತೂಹಲಕರ. ನಾವು ಮಾಡುವ ಧಾರ್ಮಿಕ ಆಚರಣೆ ಅಷ್ಟೇ ಏಕೆ ನಿತ್ಯ ಬಳಸುವ, ನೋಡುವ, ಆಡುವ... ಹೀಗೆ ಎಲ್ಲದರಲ್ಲೂ ಸೆಕ್ಸ್ ಎಲಿಮೆಂಟ್ ಇದ್ದೇ ಇರುತ್ತೆ. ಧರ್ಮದ ಸಂಕೇತಗಳಾಗಲಿ, ಬಳಸುವ ವಸ್ತುಗಳ ವಿನ್ಯಾಸವಾಗಲಿ, ಬಣ್ಣ, ಆಕಾರ ಪ್ರತಿಯೊಂದರಲ್ಲೂ ಇದು ಗುಪ್ತಗಾಮಿನಿಯಂತೆ ಸುಳಿಯುತ್ತಲೇ ಇರುತ್ತದೆ. ಜಗತ್ತಿನ ಇಂಥ ಲೌಕಿಕ ಪ್ರಪಂಚವನ್ನು, ಅಧ್ಯಾತ್ಮ, ಧಾರ್ಮಿಕ ವಿಚಾರವನ್ನು ಒಂದರ್ಥದಲ್ಲಿ ಕೆಣಕುವ ಕಾರ್ನಾಡರ ಹೂವು ನಾಟಕದ ರಂಗಪ್ರಯೋಗ ಭಾರತೀಯ ರಂಗಭೂಮಿಯಲ್ಲೊಂದು ಉತ್ತಮ ಯತ್ನ ಎನ್ನಬಹುದು.