Saturday, October 31, 2009
ರಾಜ್ಯೋತ್ಸವದ ಶುಭ ನುಡಿಗಳು....
ಕನ್ನಡ ನಮಗೆ ನೆಲದ ಭಾಷೆ, ಆಡುವ ಮತ್ತು ಬರೆಯುವ ಭಾಷೆ... ಒಟ್ಟು ಬದುಕಿನದೇ ಭಾಷೆಯಾಗಿದೆ.
ಕನ್ನಡದ ಉದಾತ್ತ ಭಾವಕ್ಕೆ ಜೀವಪರ ಆಶಯಗಳಿವೆ. ಹೀಗಾಗಿ ಇಲ್ಲಿ ವಿಜ್ಞಾನ, ತಂತ್ರಜ್ಞಾನ ಸುಪ್ತವಾಗಿ ಬೆಳೆಯಿತು. ಸಾಫ್ಟ್ ವೇರ್ ಮೂಲಕ ಕನ್ನಡದ ಗಾಳಿ ವಿಶ್ವದ ದಶದಿಕ್ಕಿಗೂ ಹಬ್ಬಿದ್ದು ಇಂಥ ಜೀವಪರ ಆಶಯದಿಂದಲೇ ಎಂದು ಬೇರೆ ಹೇಳಬೇಕಾ?
ಆದರೆ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಕಸುವು ತುಂಬುವ ಕೆಲಸ ಮಾತ್ರ ಅಂದುಕೊಂಡಂತೆ ಆಗುತ್ತಿಲ್ಲ. ಶಿಕ್ಷಣದ ಸ್ವರೂಪದಲ್ಲೇ ಕನ್ನಡ ಸಂಸ್ಕೃತಿ ಮತ್ತಷ್ಟು ಶಕ್ತಿಯುತವಾಗಿ ಸೇರಿಕೊಳ್ಳಬೇಕಿದೆ. ಇದು ಸರ್ಕಾರಗಳೇ ಮಾಡಬೇಕಾದ ಕೆಲಸ. ಪ್ರಜ್ಞಾವಂತರು, ಚಿಂತಕರು ಇದಕ್ಕೆ ಒತ್ತಾಸೆಯಾಗಿರಬೇಕಾಗುತ್ತದೆ.
ರಾಜ್ಯದ ಪ್ರತಿ ಪ್ರಜೆಯ ಜೀವದ್ರವ್ಯ ಕನ್ನಡ ಸಂಸ್ಕೃತಿ ಆಗಬೇಕು ಎನ್ನುವ ಇಂಥ ಮನೋಧರ್ಮ ಮತ್ತಷ್ಟು ಕಸುವು ಪಡೆದುಕೊಳ್ಳಲಿ.
ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು
Tuesday, October 27, 2009
ಯಡಿಯೂರಪ್ಪ ಕುರ್ಚಿಗೆ ಗಣಿ ಧಣಿಗಳಿಟ್ಟ ರಾಜಕೀಯ ಬಾಂಬ್!
ಯಡಿಯೂರಪ್ಪ ಕೇವಲ ಲಿಂಗಾಯತರನ್ನಿಟ್ಟುಕೊಂಡು ರಾಜ್ಯಭಾರ ನಡೆಸಲು ಹವಣಿಸುವುದು ಬಹು ಬೇಗ ಜನತೆಗೆ ಅರ್ಥವಾಗಿಬಿಟ್ಟಿತು. ಮಠಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ಸಮುದಾಯದ ದ್ರುವೀಕರಣಕ್ಕೆ ಯತ್ನಿಸಿದರು. ಈ ಭರಾಟೆಯಲ್ಲಿ ತಮಗೆ ಬೆಂಗಾವಲಾಗಿ ನಿಂತ ಗಣಿ ಧಣಿಗಳ ಉಪಕಾರವನ್ನೇ ಮರೆತರು. ರೆಡ್ಡಿ ನಾಯಕರನ್ನು, ನಾಯಕ ಸಮಾಜದವರನ್ನು ಹೇಗಾದರೂ ನಿಭಾಯಿಸಬಹುದು ಎನ್ನುವ ಅವರ ಲೆಕ್ಕಾಚಾರ ತಲೆಕೆಳಗಾಯಿತು.
ಸಂಘ ಪರಿವಾರದ ಕೆಂಗಣ್ಣಿಗೂ ಯಡಿಯೂರಪ್ಪ ಗುರಿಯಾದರು. ಬಿಜೆಪಿಯಲ್ಲಿನ ಬ್ರಾಹ್ಮಣರನ್ನು ಕಡೆಗಣಿಸಲಾಯಿತೆನ್ನುವ ವ್ಯವಸ್ಥಿತ ಪುಕಾರಿಗೆ ಮಾಧ್ಯಮಗಳ ಪರೋಕ್ಷ ಸಹಾಯವೂ ದೊರಕಿತು. ಹಿಂದೂತ್ವದ ಹೂಂಕಾರ ಎತ್ತಲೆಂದು ಯಡಿಯೂರಪ್ಪ ಅವರನ್ನು ಬಳಸಿಕೊಂಡ ಸಂಘ ಪರಿವಾರಕ್ಕೆ ಒಂದು ರೀತಿಯ ಆಘಾತಕಾರಿ ಬೆಳವಣಿಗೆ ಇದು. ಹಿಂದೂ ಸಂಘಟನೆ ಬಿಟ್ಟು ಅದರಿಂದ ಶತಮಾನಗಳ ಹಿಂದೆ ಹೊರಬಂದ ಬಸವಣ್ಣನ ಅನುಯಾಯಿಗಳ ವೀರಶೈವ ಧರ್ಮ ಸಂಘಟನೆಗೆ ನಿಂತರು ಯಡಿಯೂರಪ್ಪ. ಈ ಯತ್ನ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಲು ಪ್ರಮುಖ ಕಾರಣ. ಅನಂತಕುಮಾರ್ ಮತ್ತಿತರ ಬ್ರಾಹ್ಮಣ ನಾಯಕರ ಹಿಂದೂತ್ವದ ಜಪಕ್ಕೆ ಬಿಜೆಪಿ ಪಾಳಯದಲ್ಲಿ ಕವಡೆ ಕಿಮ್ಮತ್ತೂ ಇರಲಿಲ್ಲ. ಈ ಗ್ಯಾಂಗ್ ಕೂಡ ಶಾಕ್ ಕೊಡಲು ಹೊಂಚು ಹಾಕುತ್ತಲೇ ಇದೆ.
ಇನ್ನು ರೆಡ್ಡಿ ಬಳಗ, ಅದಿರು ಲಾರಿಗೆ ವಿಧಿಸಿದ ಭಾರಿ ಸುಂಕ ತೆರಿಗೆಯಿಂದ ತಮ್ಮ ವ್ಯವಹಾರಕ್ಕೆ ಕಲ್ಲು ಬೀಳುತ್ತದೆಂದು ಕಂಗಾಲಾಗಿದೆ. ಸಿಎಂ ಗೆ ಮತ್ತು ಪಾರ್ಟಿಗೆ ಬೇಕಾದಾಗ ದುಡ್ಡು, ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ರೆಡ್ಡಿಗಳಿಗೆ ಭಾರಿ ತೆರಿಗೆ ವಿಧಿಸುವ ತಂತ್ರ ತಲೆಬಿಸಿ ತಂದಿದೆ. ಸಿಎಂ ವಿರುದ್ಧ ತಿರುಗಿ ಬೀಳಲು ಇದಕ್ಕಿಂತ ಉತ್ತಮ ಅವಕಾಶ ಬೇಕಾ?
ಅತ್ತ ನಾಯಕ ಸಮುದಾಯದ ಸಚಿವರು, ಸದಸ್ಯರು ರಾಜಕೀಯ ದಾಳ ಎಸೆಯುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ರೆಡ್ಡಿಗಳು ಪರಿಹಾರ ಕಾರ್ಯಕ್ಕೆಂದು ತಾವೇ ಸ್ವತಃ ಐವತ್ತು ಸಾವಿರ ಮನೆ ಕಟ್ಟಿಸಿಕೊಡುವ ನಿರ್ಧಾರಕ್ಕೆ ಬಂದಿದ್ರು. ಈ ಸಂಬಂಧ ಯಡಿಯೂರಪ್ಪ ಅವರಿಂದ ಗ್ರೀನ್ ಸಿಗ್ನಲ್ ಪಡೆಯಲೆತ್ನಿಸಿದಾಗ ಅವರು ಗರಂ ಆಗಿದ್ದಾರೆ. ಸರ್ಕಾರಕ್ಕೇ ಮುಜುಗರ ತರುವ ಯತ್ನವಿದು ಎಂದು ಸಿಎಂ ಸಿಡಿಮಿಡಿಗೊಂಡಿದ್ದಾರೆ. ಅಷ್ಟು ಹಣ ಸರ್ಕಾರಕ್ಕೆ ಕೊಟ್ಟರೆ, ಸರ್ಕಾರವೇ ನಿಂತು ಇದನ್ನು ಮಾಡಬಹುದಲ್ಲ... ಎನ್ನುವ ಪ್ರತಿದಾಳ ಎಸೆಯಲೆತ್ನಿಸಿದ್ದಾರೆ. ಇದು ರೆಡ್ಡಿ ಬಂಧುಗಳ ಕೋಪ ನೆತ್ತಿಗೇರಲು ಕಾರಣವಾಗಿದೆ. ಹೀಗಾಗಿ ದೊಡ್ಡ ಕಲ್ಲು ಬೀಸುವ ನಿರ್ಧಾರಕ್ಕೆ ರೆಡ್ಡಿ ಗ್ಯಾಂಗ್ ಸಜ್ಜಾಗುತ್ತಿದೆ.
ಯಡಿಯೂರಪ್ಪ ಮುಂಚಿನಿಂದ ಅಗ್ರೆಸಿವ್ ನೆಸ್ ಗೆ ಒತ್ತು ಕೊಟ್ಟರು. ಅದು ಅಭಿವೃದ್ಧಿ ಮಂತ್ರಕ್ಕಷ್ಟೇ ಸೀಮಿತವಾಗಲಿಲ್ಲ. ಲಿಂಗಾಯತರ ಕ್ಷೇಮಾಭಿವೃದ್ಧಿಗಾಗಿ ಎಲ್ಲ ಮಾಡುತ್ತಿರುವುದು ಎನ್ನುವಂತೆ ವರ್ತಿಸತೊಡಗಿದರು. ಕೊಂಚ ಸಂಯಮದಿಂದ ಮತ್ತು ಪರಧರ್ಮ ಸಹಿಷ್ಣು ಭಾವನೆಯಿಂದ ಕೆಲಸ ಮಾಡಬೇಕಿತ್ತು. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೂ ಆಗುತ್ತಿದೆ. ಎಲ್ಲೋ ಏನೋ ನಡೆಯುತ್ತಿದೆ. ಬಳ್ಳಾರಿ ಶಕ್ತಿ ಕೇಂದ್ರವಾಗುತ್ತಿರುವುದರ ಹಿಂದೆ ಪ್ರತಿಪಕ್ಷಗಳ ರಾಜಕೀಯ ತಂತ್ರವೂ ಇದೆ ಅನಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ವರ್ಚಸ್ಸು ಪ್ರಪಾತಕ್ಕಿಳಿಯುತ್ತಿದೆ. ಅದರ ಪರಿಣಾಮ ರಾಜ್ಯಕ್ಕೂ ಆಗುತ್ತಿದೆ. ಅಲ್ಲಿ ಅಡ್ವಾಣಿ ಅವರಿಗೆ ಗೇಟ್ ಪಾಸ್ ರೆಡಿಯಾಗುತ್ತಿದೆ. ಇಲ್ಲಿ ಯಡಿಯೂರಪ್ಪ ಕುರ್ಚಿಗೆ ಗಣಿ ಧಣಿಗಳು ಬಾಂಬ್ ಕಟ್ಟಿ ಕೂತಿದ್ದಾರೆ. ಮತ್ತೊಂದು ಚುನಾವಣೆ ಬರುವುದೋ ಅಥವಾ ಮತ್ತೊಬ್ಬ ಲಿಂಗಾಯತನ ಕೈಗೇ ಸರ್ಕಾರ ಹೋಗುವುದೋ? ರಾಮುಲು ಅದೃಷ್ಟ ಖುಲಾಯಿಸಲೂಬಬುದೇನೋ!
Thursday, October 15, 2009
ರಾಜ್ಯದ ಉತ್ತರದಲ್ಲಿ ಅತಿವೃಷ್ಠಿ: ಪರಿಹಾರ ಮತ್ತು ರಾಜಕೀಯ ಪ್ರವಾಹ!
ಆಡಳಿತ ಪಕ್ಷ ಆತ್ಮಮರುಕತನದ ಮಾತನಾಡುತ್ತಿದೆ. ಸಹಾಯಕ್ಕಾಗಿ ಜನತೆಯ ಮುಂದೆ ಕೈಚಾಚುತ್ತಿದೆ. ಪರಿಹಾರ ನೀಡುವುದಕ್ಕೆ ಮಾನದಂಡಗಳ ಬಗ್ಗೆ ಯೋಚಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಖಜಾನೆಯಲ್ಲಿ ಪರಿಹಾರಕ್ಕೆ ಸಾಕಾಗುವಷ್ಟು ದುಡ್ಡು ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಕಾದಷ್ಟು ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಇದಕ್ಕಿಂತ ಅವರು ಕೇಂದ್ರದಿಂದ ಹಣ ಪಡೆಯುವ ಚಾಕಚಕ್ಯತೆ ತೋರಬೇಕಿತ್ತು. ರಾಜಕೀಯದ ಮಾತು ಬಿಟ್ಟು ನೆರೆಪೀಡಿತ ಜನರ ನೆರವಿಗಾಗಿ ತಮ್ಮ ಪ್ರತಿಷ್ಠೆ, ಇಗೋ ತೊರೆದು ಒಬ್ಬ ನಿಜವಾದ ಜನಪ್ರತಿನಿಧಿಯಾಗಿ ದನಿ ಎತ್ತಬೇಕಿತ್ತು. ಬದಲಾಗಿ ಅವರು ರಾಜಕೀಯ ಮಾತನ್ನಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರು ಪ್ರತಿನಿಧಿಸುವ ಪಕ್ಷದೊಳಗೇ ಕೆಲವರು ಪರಿಹಾರ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿಲ್ಲ. ಅದರಲ್ಲೂ ಅನಂತಕುಮಾರ್ ಗ್ಯಾಂಗ್ ಯಾಕೊ ಅಷ್ಟು ಚುರುಕಾಗಿ ಓಡಾಡುತ್ತಿಲ್ಲ. ಇದು ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಸಾಕ್ಷಿ. ಅದು ಹಾಗಿರಲಿ.
ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಜನನಾಯಕನಿಗೆ ರೈತರೇ ಹೆಚ್ಚಾಗಿ ಸಂಕಷ್ಟಕ್ಕೆ ಈಡಾಗಿರುವ ಈ ಸಂದರ್ಭದಲ್ಲಿ ಬೇರೆಯದೇ ರೀತಿಯ ಕಾಳಜಿ ಇರಬೇಕಿತ್ತು. ಆ ಕಾಳಜಿಯನ್ನು ಕಾರ್ಯಗತಗೊಳಿಸುವುದಕ್ಕೆ ಬೇರೆಯದೇ ಕಾರ್ಯವೈಖರಿ ಇರಬೇಕಿತ್ತು. ಅದು ಕಾಣಿಸುತ್ತಿಲ್ಲ.
ಈಗಿನ ಸಂದರ್ಭದಲ್ಲಿ ಕೇಂದ್ರ ಅಥವಾ ಇತರೆ ಯಾವುದೇ ಮೂಲಗಳಿಂದ ಬೇಕಾದ ಸಂಪನ್ಮೂಲ ಕ್ರೋಢೀಕರಿಸಲು ಸಾಕಷ್ಟು ಅವಕಾಶಗಳಿವೆ. ಆ ಯತ್ನ ಮಾಡಿದರು ಕೂಡ. ಆದರೆ, ಅದು ತೀರ ರಾಜಕೀಯ ಪ್ರೇರಿತ ಎನಿಸಿದ್ದು ಎದ್ದು ಕಾಣುವ ಸತ್ಯ. ಹಣ ಸಂಗ್ರಹಕ್ಕೆಂದು ಬೆಂಗಳೂರನ್ನೇ ಪ್ರಮುಖವಾಗಿಟ್ಟುಕೊಂಡು ಸುತ್ತಾಡಿ ಕೋಟ್ಯಂತರ ಹಣ ಸಂಗ್ರಹಿಸಿ ಷಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುವುದರ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನೆರಳಿತ್ತು. ನಗರದ ಜನರ ಸಿಂಪತಿ ಗಿಟ್ಟಿಸಿಕೊಳ್ಳುವ ಯತ್ನವಿತ್ತು. ಅದು ಎಂಥವರಿಗೂ ಕಾಣಿಸುವಂಥ ನಗ್ನಸತ್ಯವಾಗಿತ್ತು. ಕೇಂದ್ರಕ್ಕೆ ಹಣ ಕೊಡುವ ಮನಸ್ಸಿಲ್ಲ, ನಮ್ಮ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿದೆ, ರಾಜ್ಯದ ಜನತೆಯೇ ಇಂಥ ಕಷ್ಟಕ್ಕೆ ನೆರವಾಗಬೇಕು ಎಂದು ಹೇಳುವ ಯತ್ನವೂ ಇತ್ತು. ಕೋಟ್ಯಂತರ ಹಣ ಸಂಗ್ರಹಿಸಿ ತಾವೇ ಪರಿಹಾರ ಕಾರ್ಯಕ್ಕೆ ಸಮರೋಪಾದಿಯಲ್ಲಿ ತೊಡಗಿ ಕೇಂದ್ರಕ್ಕೆ ತಮ್ಮ ತಾಕತ್ತು ಪ್ರದರ್ಶಿಸುವ ಹುಂಬತನವೂ ಇತ್ತು.
ಆದರೆ, ವಾಸ್ತವದಲ್ಲಿ ರಾಜ್ಯ ತನ್ನಷ್ಟಕ್ಕೆ ತಾನೇ ಹಣದ ವ್ಯವಸ್ಥೆ ಮಾಡುವುದು ಸುಲಭವೂ ಆಗಿರಲಿಲ್ಲ. ಏಕಾಂಗಿಯಾಗಿ ಇದನ್ನು ಎದುರಿಸುವಷ್ಟು ಅನುಭವವೂ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಕೂಡ ರಾಜ್ಯದ ಸ್ಥಿತಿ ಮತ್ತು ಇಲ್ಲಿನ ಸರ್ಕಾರ ಇಂಥ ಸೂಕ್ಷ್ಮ ಮತ್ತು ಜಟಿಲ ಸ್ಥಿತಿ ಎದುರಿಸುವಲ್ಲಿ ಎಷ್ಟು ಅಶಕ್ತವಾಗಿದೆ ಎಂದು ಜನತೆಗೆ ತೋರಿಸುವ ತಂತ್ರ ಬಳಸಿತು. ಇದು ರಾಜಕೀಯ ದಾಳ ಪ್ರತಿದಾಳವಲ್ಲದೆ ಬೇರೆ ಇನ್ನೆನೂ ಅಲ್ಲ....
ಮಠಗಳಿಗೆ ಬೇಕಾದಷ್ಟು ದುಡ್ಡು ಚೆಲ್ಲಿದ ಯಡಿಯೂರಪ್ಪ, ಖಜಾನೆಯ ಬಗ್ಗೆ ಆಗ ಯೋಚಿಸಲೇ ಇಲ್ಲ. ಯಾವ ನಿಯಮಾವಳಿಗಳು, ಕಟ್ಟುಪಾಡುಗಳು ಆಗ ಲೆಕ್ಕಕ್ಕೇ ಬರಲಿಲ್ಲ. ಹಾಗೆ ಒಂದು ನಿರ್ಧಿಷ್ಟ ಹಿತಾಸಕ್ತಿಯ ಉದ್ದೇಶಗಳಿಗೆ ಬೊಕ್ಕಸ ಬಳಸಿಕೊಳ್ಳುವುದು ಅನಿವಾರ್ಯವಾಗಿತ್ತಾ ಎಂದು ಯೋಚಿಸಲಿಲ್ಲ. ಅಂಥ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರ್ವಪಕ್ಷಗಳ ಜತೆ ಚರ್ಚಿಸಲೂ ಇಲ್ಲ.ಈಗಲೂ ಅಷ್ಟೇ. ಪ್ರವಾಹದಿಂದ ಜನ ತತ್ತರಿಸುತ್ತಲಿದ್ದರೆ ಒಂದು ನಿರ್ಧಿಷ್ಟ ಕಾರ್ಯತಂತ್ರ ರೂಪಿಸಿ ತಕ್ಷಣ ಕಾರ್ಯರೂಪಕ್ಕಿಳಿಯಬೇಕಿತ್ತು. ಪ್ರತಿಪಕ್ಷ ಅಥವಾ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಕಾರ್ಯದ ಸ್ಪಷ್ಟ ಕಾರ್ಯತಂತ್ರ ರೂಪಿಸಬೇಕಿತ್ತು. ಅದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಮಾನ ಜವಾಬ್ದಾರಿ ವಹಿಸಿ, ತಾವೇ ಸ್ವತಃ ನಿರ್ದೇಶನ ಮಾಡುತ್ತ, ಜನರ ಸಾಂತ್ವನಕ್ಕೆ ನಿಲ್ಲಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ಒಬ್ಬರೇ ಹೆಲಿಕಾಪ್ಟರ್ ಹತ್ತಿ ಸುತ್ತಾಡಿ, ಕಿಟಕಿಯಿಂದ ಇಣುಕಿದ ನಂತರವೇ ಸರ್ವಪಕ್ಷ ಸಭೆ, ಮತ್ತಿತರ ಕ್ರಮಗಳ ಬಗ್ಗೆ ಲೇಟಾಗೇ ನಿರ್ಧಾರಕ್ಕೆ ಬಂದರು.
ಒಂದೇ ಪಕ್ಷದ ಕಾರ್ಯಕರ್ತರನ್ನಿಟ್ಟುಕೊಂಡು ಹಣ ಸಂಗ್ರಹಿಸಿ ಪರಿಹಾರ ಸುಲಭವಾಗಿಸಲು ಸಾಧ್ಯವಿತ್ತೇನು? ತಕ್ಷಣಕ್ಕೆ ಒಂದು ಕಾರ್ಯಪಡೆ ರೂಪಿಸಿಕೊಂಡು ಪ್ರತಿಪಕ್ಷ, ಇತರ ರಾಜಕೀಯ ಪಕ್ಷಗಳ ಮುಖಂಡರನ್ನು ಅದರಲ್ಲಿ ಸೇರಿಸಿಕೊಂಡು ಜನತೆಯ ನೆರವಿಗೆ ನಿಂತಿದ್ದರೆ, ಪೀಡಿತ ಜನರಲ್ಲಿ ಬೇರೆಯದೇ ಜೀವಪ್ರೀತಿ ಉಕ್ಕುತ್ತಿತ್ತು. ಅದು ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿತ್ತು.
ಅದುಬಿಟ್ಟು ಪರಿಹಾರ ಕಾರ್ಯದಲ್ಲೂ ರಾಜಕೀಯ ಲಾಭಕ್ಕೆ ಲೆಕ್ಕಾಚಾರ ಹಾಕಿ, ಕೇವಲ ಹಣ, ಆಹಾರ ಪೊಟ್ಟಣಗಳ ಎಸೆಯುವುದರಿಂದ ಜನತೆಗೆ ಆದ ನಷ್ಟ ಭರಿಸಿಕೊಡುತ್ತೇವೆ ಎನ್ನುವುದು ಭ್ರಮೆ.
ಪೀಡಿತ ಜನರಿಗೆ ಅವರ ಬದುಕಿನ ಮೌಲ್ಯ, ಸ್ವಾಭಿಮಾನ ಉಳಿಸಿಕೊಂಡೇ ತತ್ ಕ್ಷಣದ ನೆರವಿಗೆ ನಿಲ್ಲುತ್ತಿದ್ದೇವಷ್ಟೆ ಎನ್ನುವ ವಿಶ್ವಾಸ ಮೂಡಿಸಬೇಕಿತ್ತು. ರಾಜಕೀಯ ಬದಿಗಿಟ್ಟು ತುಂಬ ಕಳಕಳಿಯಿಂದ ಮಾಡುವಂಥ ಕೆಲಸ ಇದು. ಯಡಿಯೂರಪ್ಪ ತಾವೊಬ್ಬ ಮುಖ್ಯಮಂತ್ರಿ ಎಂದುಕೊಂಡು ಇದರಲ್ಲಿ ತೊಡಗಿಕೊಳ್ಳುವ ಬದಲು, ಬಿಜೆಪಿ ನಾಯಕ ಎಂದು ಪಾಲ್ಗೊಳ್ಳಲು ನೋಡಿದರು. ಈ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳುವ ಮತ್ತು ಮುಂದೆ ದೊಡ್ಡ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆ ಈ ಮೂಲಕ ಏನಾದರೂ ಸಾಧ್ಯವೇ ಎಂದು ಯೋಚಿಸಿದರು. ಅವರ ಈಗಿನ ನಡೆ ನೋಡಿದರೆ ಹಾಗೇ ಅನಿಸುತ್ತದೆ.
ನೆರೆಪೀಡಿತ ಜನರ ಅಸಹಾಯಕ ಸ್ಥಿತಿಗೆ ನಾವು ತೋರುತ್ತಿರುವ ಔದಾರ್ಯ ಮಾತ್ರ ಎನಿಸದಂತೆ ನಡೆದುಕೊಳ್ಳುವುದು ಮುಖ್ಯ. ಆತಂಕ, ಜೀವಭಯದಲ್ಲಿದ್ದವನಿಗೆ ನಿನ್ನ ಜೀವವೂ ನನ್ನ ಹಾಗೆ ಮುಖ್ಯ; ನೀ ಬದುಕಿದರೆ ನಾನೂ ಬದುಕೇನು ಎನ್ನುವ ಕಕ್ಕುಲಾತಿ ಮುಖ್ಯ. ಆದರೆ, ಅಂಥದೊಂದು ನಡಾವಳಿ ಸರ್ಕಾರ ಅಥವಾ ರಾಜಕೀಯ ಸಂಘಟನೆಗಳಲ್ಲಿ ಕಾಣಿಸಲೇ ಇಲ್ಲ. ಇದು ಅತ್ಯಂತ ದುರದೃಷ್ಟಕರ.
ಮಠಗಳೂ ಕೂಡ ಇದರಲ್ಲಿ ತಮ್ಮ ಭಕ್ತರ ಉಳಿಸಿಕೊಳ್ಳುವ ಕಾಳಜಿ ತೋರಿದವೇ ವಿನಃ ಒಟ್ಟು ಮಾನವೀಯ ನೆಲೆಯಲ್ಲಿ ವಿಶಾಲ ಮನೋಭಾವನೆಯನ್ನೇ ತೋರಲಿಲ್ಲ. ಮಂತ್ರಾಲಯ ಮಠ ತನ್ನ ಸ್ವಾಮೀಜಿ ರಕ್ಷಣೆಗೆ ಹೆಚ್ಚು ಒತ್ತು ಕೊಟ್ಟಿತು. ಸರ್ಕಾರವೂ ತಕ್ಷಣಕ್ಕೆ ಸ್ಪಂದಿಸಿತು. ಇಲ್ಲಿ ಮಠಗಳಿಗೆ ಬೇಸ್ ಕಳಕೊಳ್ಳುವ ಭಯ ಕಾಡಿದ್ದು ಸ್ಪಷ್ಟ. ಇಡೀ ಮಂತ್ರಾಲಯ ಬೆಳೆದಿದ್ದೇ ಜನತೆಯ ದುಡ್ಡಿನಿಂದ ಅಲ್ವೇ? ಭಕ್ತರ ಮೊದಲು ಉಳಿಸುವುದು ಸ್ವಾಮೀಜಿ ಮತ್ತವರ ಟ್ರಸ್ಟ್ ಪ್ರಮುಖ ಗುರಿಯಾಗಬೇಕಿತ್ತು. ಕಾಳಜಿಯಾಗಬೇಕಿತ್ತು. ಆದರೆ ಇಲ್ಲಿ ಆದದ್ದು ತಮ್ಮ ಪೀಠ ಮತ್ತು ಜೀವ ರಕ್ಷಣೆ. ಹೀಗಾಗಿ ಧರ್ಮವೂ ಈ ವಿಷಯದಲ್ಲಿ ಜನರ ಜೀವ ಕಾಳಜಿಯನ್ನು ಪ್ರಮುಖವಾಗಿಸಿಕೊಳ್ಳಲಿಲ್ಲ ಎನ್ನುವುದು ಸ್ಪಷ್ಟ.
ಪೇಜಾವರ ಮತ್ತು ಧರ್ಮಸ್ಥಳ ಮಠಗಳು ನೆರವಿಗೆ ಮುಂದೆ ಬಂದಿದ್ದು ತಮ್ಮ ಭಕ್ತರ ಉಳಿಸಿಕೊಳ್ಳುವ ಕಸರತ್ತಾಗಿ ಕಂಡಿತೇ ವಿನಃ ವಿಶಾಲ ತಳಹದಿಯ ಮಾನವೀಯ ಕಾಳಜಿ ಎನಿಸಲಿಲ್ಲ. ತಲೆ ತಲಾಂತರದಿಂದ ಈ ಮಠಗಳಿಗೆ ಧಾರಾಕಾರವಾಗಿ ಹರಿದು ಬಂದಿದ್ದು ಜನತೆಯ ದುಡ್ಡು. ಅದರಲ್ಲೂ ರಾಜ್ಯದ ಉತ್ತರ ಭಾಗದ ಜನತೆ ಈ ಮಠಗಳ ಬೊಕ್ಕಸ ತುಂಬುತ್ತಲೇ ಬಂದಿದ್ದಾರೆ. ಎಷ್ಟೊ ಜನ ತಮಗೇ ಗಂಜಿಗೂ ಗತಿ ಇಲ್ಲದಿದ್ದ ಸಂದರ್ಭದಲ್ಲೂ ದೇವರೇ ಮುನಿಸಿಕೊಂಡಿದ್ದಾನೆಂದು ಆತನ ಮೇಲೆ ನಂಬಿಕೆಯಿಟ್ಟು ಈ ಮಠಗಳ ಡಬ್ಬಿ ತುಂಬಿದ್ದಾರೆ. ಡಬ್ಬಿಗಳಲ್ಲಿನ ಅವರದೇ ಒಂದಷ್ಟು ಭಾಗವನ್ನು ಇಂಥ ಸೂಕ್ಷ್ಮ ಸಂದರ್ಭದಲ್ಲಿ ಅವರಿಗೇ ಮುಟ್ಟಿಸುವ ಸಹಜವಾದ ಸಣ್ಣ ಜವಾಬ್ದಾರಿ ಈ ಮಠಗಳದ್ದಾಗಬೇಕಿತ್ತು. ನಾವು ಲಕ್ಷ ಮನೆ ಕಟ್ಟಿಸುತ್ತೇವೆ, ಕೋಟಿ ದುಡ್ಡು ಕೊಡ್ತೇವೆ ಎಂದು ಮಾಧ್ಯಮಗಳ ಮುಂದೆ ಪ್ರಚಾರಕ್ಕಾಗಿ ಚಂಡೆ ಬಾರಿಸುವ ಅಗತ್ಯ ಇರಲೇ ಇಲ್ಲ. ಯಾಕೆಂದರೆ ಈ ದುಡ್ಡು ಮಠಗಳ ಭಕ್ತರದೇ ವಿನಃ ಮಠವೇ ದುಡಿದು ಗಳಿಸಿದ್ದಲ್ಲ. ಹೀಗಾಗಿ ಮೆಹರ್ಬಾನಗಿ ಎಲ್ಲಿಂದ ಬಂತು? ಕೆರೆಯ ನೀರನು ಕೆರೆಗೆ ಚೆಲ್ಲುವಂತೆ ದಾಸರೇ ಹೇಳಿಲ್ಲವೇನು?
ಯಡಿಯೂರಪ್ಪ ಸರ್ಕಾರ ಬಂದಾಗಿನಿಂದ ರೈತರಿಗೆ ದಕ್ಕಿದ ಮೊದಲ ಗೌರವವೇ ಗೋಲಿಬಾರ್! ಈಗ ಅತಿವೃಷ್ಟಿಯ ಭೀಕರ ಸ್ಥಿತಿ!... ರಾಜ್ಯದ ಬಹುತೇಕ ಕೃಷಿ ಭಾಗವೇ ಉತ್ತರದಲ್ಲಿದೆ. ಮುಖ್ಯಮಂತ್ರಿಗಳ ಆಪರೇಷನ್ ಕಮಲ್ ಗೆ ಸಾಥ್ ಕೊಟ್ಟ ಪಕ್ಷದ ನಾಯಕರೂ ಹೆಚ್ಚಾಗಿ ಈ ಭಾಗದವರೇ. ಯಡಿಯೂರಪ್ಪನವರ ಕೋಮಿನವರೇ ಬಹುಸಂಖ್ಯೆಯಲ್ಲಿ ಹಾನಿಗೊಳಗಾಗಿದ್ದಾರೆ. ಹೀಗಾಗಿ ವೈಯಕ್ತಿಕವಾಗಿಯೂ ಯಡಿಯೂರಪ್ಪನವರಿಗಿದು ಪ್ರತಿಷ್ಠೆಯ ಪ್ರಶ್ನೆ.
ಕಟ್ಟಕಡೆಯ ಸತ್ಯವೇನೆಂದರೆ, ಬರಿಯ ಸಾಂತ್ವನದಿಂದ ಮತ್ತು ಆ ಕ್ಷಣದ ಧನ ಸಹಾಯದಿಂದ ನೆರೆಪೀಡಿತ ಜನರ ಬವಣೆ ನೀಗುವುದಿಲ್ಲ. ಅದಕ್ಕೆ ಶಾಶ್ವತ ಪರಿಹಾರವೂ ಬೇಕು. ಶಾಶ್ವತ ಪರಿಹಾರ ಎನ್ನೋದು ಎಷ್ಟರಮಟ್ಟಿಗೆ ಸಾಧ್ಯ? ಈ ಬಗ್ಗೆ ಹೆಚ್ಚು ಚಿಂತನೆ ನಡೆಯಬೇಕಲ್ಲದೇ ಬರಿಯ ರಾಜಕೀಯ ಮಾಡುವದಲ್ಲ ಎನ್ನುವುದು ಯಾವಾಗ ನಮ್ಮ ನಾಯಕರ ಅರಿವಿಗೆ ಬರುತ್ತೊ?
ಕೃಪೆ: ದಿಲ್ ಕೀ ಬಾತ್ ವರ್ಡ್ ಪ್ರೆಸ್ ಡಾಟ್ ಕಾಮ್